ನಿಮ್ಮ ಮಕ್ಕಳ ಮುಂದೆ ಯಾವುದೇ ಕಾರಣಕ್ಕೂ ನೀವು ಇಂತಹ ಕೆಲಸಗಳನ್ನು ಮಾಡಬಾರದು!
ರಾಜಕೀಯ, ಅರ್ಥಶಾಸ್ತ್ರ, ಸಮಾಜಶಾಸ್ತ್ರ ಸೇರಿದಂತೆ ಎಲ್ಲಾ ವಿಷಯಗಳಲ್ಲೂ ಆಳವಾದ ಜ್ಞಾನವನ್ನು ಹೊಂದಿದ್ದವರು ಆಚಾರ್ಯ ಚಾಣಕ್ಯ. ಆಚಾರ್ಯ ಚಾಣಕ್ಯರ ಒಂದೊಂದು ಸಂದೇಶಗಳೂ ಇಂದಿಗೂ, ಎಂದೆಂದಿಗೂ ಪ್ರಸ್ತುತ. ಚಾಣಕ್ಯ ನೀತಿಯನ್ನು ಅನುಸರಿಸಿಕೊಂಡು ಹೋದರೆ ಬದುಕು ಇನ್ನಷ್ಟು ಅದ್ಭುತವಾಗಿ ಕಾಣುತ್ತದೆ. ಅದ್ಭುತ ಜೀವನ ಮೌಲ್ಯಗಳು ಆಚಾರ್ಯರ ಸಂದೇಶದಲ್ಲಿವೆ. ಇವರ ಸಂದೇಶಗಳು ಬದುಕಿಗೆ ದಾರಿ ದೀಪ ಕೂಡಾ ಹೌದು. ಅಂತೆಯೇ, ಆಚಾರ್ಯ ಚಾಣಕ್ಯರು ಹೆತ್ತವರಿಗೂ ಒಂದಷ್ಟು ಸಂದೇಶವನ್ನು ನೀಡಿದ್ದಾರೆ. ಮಕ್ಕಳ ಎದುರು ಹೆತ್ತವರು ಯಾವ ತಪ್ಪುಗನ್ನು ಮಾಡಬಾರದು ಎಂಬುದರ ಬಗ್ಗೆ ಆಚಾರ್ಯರು ಹೇಳಿದ್ದು, ಅದರ ಬಗ್ಗೆ ಇಲ್ಲಿ ನೋಡೋಣ.
ಅಶ್ಲೀಲ ಭಾಷೆ ಬಳಸಬೇಡಿ, ಪ್ರೀತಿಯಿಂದ ತಿಳಿ ಹೇಳಿ–ಮಕ್ಕಳು ದೇವರಿಗೆ ಸಮಾನ. ಜತೆಗೆ, ಮಕ್ಕಳ ಮನಸ್ಸು ಹಸಿ ಮಣ್ಣಿನ ಗೋಡೆಯಂತೆ. ಹೀಗಾಗಿ, ಬಲು ಪ್ರೀತಿಯಿಂದ ಮಕ್ಕಳನ್ನು ಬೆಳೆಸಬೇಕು. ಐದು ವರ್ಷದವರೆಗೆ ಮಕ್ಕಳಿಗೆ ಎಲ್ಲವನ್ನೂ ಅತ್ಯಂತ ಪ್ರೀತಿಯಿಂದ ಅರ್ಥ ಮಾಡಿಸಬೇಕು. ಮಕ್ಕಳು ಮುಗ್ಧರು. ಉದ್ದೇಶಪೂರ್ವಕವಾಗಿ ಮಕ್ಕಳು ತಪ್ಪು ಮಾಡುವುದಿಲ್ಲ. ಹೀಗಾಗಿ, ಅಷ್ಟೇ ಪ್ರೀತಿಯಿಂದ ಮಕ್ಕಳಿಗೆ ತಿಳಿ ಹೇಳಬೇಕು. ಅದೂ ಅಲ್ಲದೆ, ನಿಮ್ಮ ಮಕ್ಕಳು ನಿಮ್ಮನ್ನು ನೋಡಿ ಕಲಿಯುತ್ತಾರೆ. ನಿಮ್ಮ ಮಕ್ಕಳು ಸಭ್ಯ ಮತ್ತು ಸುಸಂಸ್ಕೃತರಾಗಬೇಕಾದರೆ ಮೊದಲು ಮಾಡಬೇಕಾದ ಕೆಲಸ ಅವರ ಭಾಷೆ ಸುಧಾರಿಸುವುದು. ಇದಕ್ಕಾಗಿ ನೀವು ಅವರ ಮುಂದೆ ಉತ್ತಮ ಭಾಷೆಯನ್ನೂ ಬಳಸಬೇಕು. ನಿತ್ಯ ಜೀವನದ ವ್ಯವಹಾರದ ವೇಳೆಯೂ ಯಾವುದೇ ಕಾರಣಕ್ಕೂ ಅಶ್ಲೀಲ ಪದಗಳನ್ನು ಬಳಸಬೇಡಿ. ಅದರಲ್ಲೂ ಮಕ್ಕಳ ಎದುರಿಗಂತು ಇಂತಹ ಪದಗಳನ್ನು ಬಳಸಲೇಬಾರದು. ಯಾಕೆಂದರೆ, ದೊಡ್ಡವರು ಏನು ಮಾತನಾಡುತ್ತೇವೆಯೋ ಅದನ್ನೇ ಮಕ್ಕಳು ಅಳವಡಿಸಿಕೊಳ್ಳುತ್ತಾರೆ. ಹೀಗಾಗಿ, ಮಕ್ಕಳ ಮುಂದೆ ಯಾವಾಗಲೂ ಒಳ್ಳೆಯದ್ದನ್ನೇ ಮಾತನಾಡಿ, ಒಳ್ಳೆಯ ರೀತಿಯೇ ವ್ಯವಹರಿಸಿ.
ಪರಸ್ಪರರ ತಪ್ಪುಗಳನ್ನು ಕಂಡು ಹಿಡಿದು ಮಾತನಾಡಬೇಡಿ
ಆಚಾರ್ಯ ಚಾಣಕ್ಯ ಹೇಳುವಂತೆ ಐದು ವರ್ಷ ತುಂಬಿದಾಗ ಮಗು ಸ್ವಲ್ಪಮಟ್ಟಿಗೆ ವಿಷಯಗಳನ್ನು ಅರ್ಥಮಾಡಿಕೊಳ್ಳಲು ಪ್ರಾರಂಭಿಸುತ್ತದೆ. ಈ ವಯಸ್ಸಿನಲ್ಲಿ ತಪ್ಪು ಮಾಡಿದರೆ ಸ್ವಲ್ಪ ಗದರಿಸಬಹುದು. ಆದರೆ, ಅಷ್ಟೇ ಪ್ರೀತಿ ತೋರಿಸುವುದು ಕೂಡಾ ಬಹಳ ಮುಖ್ಯ. ಇದರ ಜತೆಗೆ ಹೆತ್ತವರು ಮಕ್ಕಳ ಎದುರು ಪರಸ್ಪರರ ತಪ್ಪುಗಳ ಬಗ್ಗೆ ಮಾತನಾಡುವುದು, ಕುಂದು ಕೊರತೆಗಳನ್ನು ಎತ್ತಿ ತೋರಿಸದಂತೆ ಕಾಳಜಿ ವಹಿಸುವುದು ಕೂಡಾ ಅಗತ್ಯ. ಇದರಿಂದ ಮಕ್ಕಳಿಗೂ ಕಿರಿಕಿರಿಯಾಗುತ್ತದೆ. ಜತೆಗೆ, ಅವರೂ ಇದನ್ನೇ ಅನುಸರಿಸಿಕೊಂಡು ಹೋಗುತ್ತಾರೆ.
ಗೌರವದಿಂದ ಕಾಣಿರಿ–ಚಾಣಕ್ಯ ನೀತಿಯ ಪ್ರಕಾರ ಪೋಷಕರು ಪರಸ್ಪರ ಗೌರವದಿಂದ, ಘನತೆಯ ಭಾವನೆಯಿಂದ ಮತ್ತು ಅಷ್ಟೇ ಪ್ರೀತಿಯಿಂದ ಇರುವುದು ಕೂಡಾ ಬಹಳ ಮುಖ್ಯ. ಇದರಿಂದ ಮಕ್ಕಳು ಕೂಡಾ ಪರಸ್ಪರ ಗೌರವದಿಂದ ಇರಲು ಕಲಿಯುತ್ತಾರೆ. ಮನೆ ಮಂದಿಯೊಂದಿಗೆ ಅದೇ ಪ್ರೀತಿಯಲ್ಲಿ ಇರುತ್ತಾರೆ. ಮೊದಲೇ ಹೇಳಿದಂತೆ ಯಾವುದೇ ಕಾರಣಕ್ಕೂ ಮಕ್ಕಳ ಎದುರು ಅವಹೇಳನಕಾರಿ ಪದಗಳನ್ನು ಅಥವಾ ನಿಂದನೀಯ ಪದಗಳನ್ನು ಬಳಸಲೇಬಾರದು. ಇದರಿಂದ ಭವಿಷ್ಯದಲ್ಲಿ ನಿಮಗೇ ತೊಂದರೆಯಾಗಬಹುದು, ಮಕ್ಕಳಿಗೂ ತೊಂದರೆಯಾಗಬಹುದು. ಹಾಗಾಗಿ, ಸುಸಂಸ್ಕೃತರನ್ನಾಗಿ ಮಕ್ಕಳನ್ನು ಬೆಳೆಸುವ ಜವಾಬ್ದಾರಿ ಕೂಡಾ ಹೆತ್ತವರ ಮೇಲೆ ಇರುತ್ತದೆ.
ಸುಳ್ಳು ಹೇಳದಿರಿ—ಸುಳ್ಳು ಯಾವತ್ತಿದ್ದರೂ ಶತ್ರು. ಅಂತೆಯೇ, ಆಚಾರ್ಯ ಚಾಣಕ್ಯರು ತಮ್ಮ ನೀತಿ ಶಾಸ್ತ್ರದಲ್ಲಿ ಪೋಷಕರಿಗೆ ಈ ಕಿವಿ ಮಾತು ಕೂಡಾ ಹೇಳಿದ್ದಾರೆ. ಸುಳ್ಳಿನ ಬಗ್ಗೆ ಮಾತನಾಡುತ್ತಾ, ಪೋಷಕರು ಮಕ್ಕಳ ಎದುರಿಗೆ ಯಾವತ್ತೂ ಸುಳ್ಳಾಡಬಾರದು. ಜತೆಗೆ, ಯಾವುದೇ ಕಾರಣಕ್ಕೂ ಸುಳ್ಳು ಹೇಳಬಾರದು ಎಂಬುದನ್ನು ಹೆತ್ತವರು ಮಕ್ಕಳಿಗೆ ಕೂಡಾ ಪ್ರೀತಿಯಿಂದ ತಿಳಿ ಹೇಳಬೇಕಾಗುತ್ತದೆ. ಒಂದಷ್ಟು ಬಾರಿ ಹೆತ್ತವರು ಮಕ್ಕಳ ಮುಂದೆ ಸುಳ್ಳು ಹೇಳುತ್ತಾರೆ ಅಥವಾ ತಮ್ಮ ಸ್ವಾರ್ಥಕ್ಕಾಗಿ ಮಗುವಿಗೆ ಸುಳ್ಳು ಹೇಳುತ್ತಾರೆ. ಒಂದೊಮ್ಮೆ ನೀವು ಮಕ್ಕಳ ಎದುರು ಸುಳ್ಳು ಹೇಳುತ್ತಾ ವ್ಯವಹರಿಸಿದರೆ ಪುಟಾಣಿಗಳೂ ಅದನ್ನೇ ರೂಢಿಸಿಕೊಳ್ಳುವ ಅಪಾಯವೂ ಇರುತ್ತದೆ. ಹೀಗಾಗಿ, ಮಕ್ಕಳ ಮುಂದೆ ಮಾತನಾಡುವಾಗ, ವ್ಯವಹರಿಸುವಾಗ ಎಷ್ಟು ಎಚ್ಚರಿಕೆ ವಹಿಸುತ್ತೇವೆಯೋ ಅಷ್ಟು ಮುಖ್ಯ.
ಜಗಳವಾಡದಿರಿ…ಸತಿ ಪತಿ ಎಂದ ಮೇಲೆ ಸಣ್ಣ ಪುಟ್ಟ ಜಗಳಗಳು ಸಾಮಾನ್ಯ. ಸಂಸಾರದಲ್ಲಿ ಸಣ್ಣ ಪುಟ್ಟ ಜಗಳ, ಹುಸಿ ಮುನಿಸು, ಬೇಸರಗಳು ಇದ್ದದ್ದೇ. ಆದರೆ, ಇವುಗಳು ಶುರುವಾದಷ್ಟೇ ಬೇಗ ಮುಗಿಯಬೇಕು ಮತ್ತು ಇದನ್ನು ಮರೆತು ಮತ್ತೆ ಅದೇ ಪ್ರೀತಿಯಿಂದ ಗಂಡ ಹೆಂಡತಿ ಮುಂದುವರಿಯಬೇಕು. ಆಗ ದಾಂಪತ್ಯ ಇನ್ನಷ್ಟು ಮಧುರವಾಗುತ್ತದೆ. ಪರಸ್ಪರ ಪ್ರೀತಿಯ ಈ ಬಂಧ ಮನೆಯಲ್ಲಿಯೂ ಖುಷಿಯ ವಾತಾವರಣ ಮೂಡಿಸುತ್ತದೆ. ಅದರ ಜತೆಗೆ, ಮಕ್ಕಳ ಮುಂದೆ ಯಾವುದೇ ಕಾರಣಕ್ಕೂ ಜಗಳ ಮಾಡದಿರಿ. ಮಕ್ಕಳ ಮುಂದೆ ಜಗಳವಾಡುವುದು ಬಹಳ ದೊಡ್ಡ ತಪ್ಪು. ಆಚಾರ್ಯ ಚಾಣಕ್ಯರ ಪ್ರಕಾರ ನೀವು ಮಕ್ಕಳ ಮುಂದೆ ಜಗಳವಾಡಿದರೆ, ಅವರ ದೃಷ್ಟಿಯಲ್ಲಿ ನಿಮ್ಮ ಗೌರವವು ಕಳೆದುಹೋಗುತ್ತದೆ.
ಸ್ನೇಹಿತರಂತೆ ಕಾಣಿರಿ…ನಿಮ್ಮ ಮಕ್ಕಳು 10 ರಿಂದ 15 ವರ್ಷ ವಯಸ್ಸಿನವರಾಗಿದ್ದರೆ ಅನೇಕ ವಿಷಯಗಳನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯವನ್ನು ಅವರು ಹೊಂದಿರುತ್ತಾರೆ. ಈ ಸಂದರ್ಭದಲ್ಲಿ ನೀವು ಕಟ್ಟುನಿಟ್ಟಾಗಿಯೇ ಅವರಿಗೆ ಬುದ್ಧಿ ಹೇಳಬಹುದು, ಸರಿ ತಪ್ಪುಗಳನ್ನು ಅರ್ಥ ಮಾಡಬಹುದು. ಆದರೆ, ಎಷ್ಟು ಕಟ್ಟುನಿಟ್ಟು ವಹಿಸಿದರೂ, ಕೋಪದಿಂದ ವರ್ತಿಸಿದರೂ ಅದಕ್ಕೊಂದು ಇತಿಮಿತಿಗಳನ್ನು ನೀವು ಹಾಕಿಕೊಳ್ಳಬೇಕು. ಕೋಪದಿಂದಲೇ ಎಲ್ಲವನ್ನೂ ಹೇಳದೆ ಪ್ರೀತಿಯಿಂದ, ಕಾಳಜಿಯಿಂದ ತಿಳಿ ಹೇಳುವ ಪ್ರಯತ್ನ ಮಾಡುವುದು ಬಹಳ ಉತ್ತಮ. ನೀವು ಎಷ್ಟು ಸಂಯಮದಿಂದ ಇರುತ್ತಿರೋ ಅಷ್ಟು ಒಳ್ಳೆಯದು. ಇನ್ನು ಮಗುವಿಗೆ 16 ವರ್ಷ ವಯಸ್ಸಾದಾಗ ನೀವು ಅವರನ್ನು ಫ್ರೆಂಡ್ಸ್ ರೀತಿ ನೋಡಿಕೊಳ್ಳಬೇಕು ಎನ್ನುತ್ತದೆ ಚಾಣಕ್ಯ ನೀತಿ. ಸ್ನೇಹಿತರಾಗಿ ಮಕ್ಕಳ ಆಲೋಚನೆಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ ಎನ್ನುತ್ತಾರೆ ಆಚಾರ್ಯ ಚಾಣಕ್ಯ. ಯಾಕೆಂದರೆ, ಈ ವಯಸ್ಸಿನಲ್ಲಿ ಮಗುವಿನಲ್ಲಿ ಅನೇಕ ಬದಲಾವಣೆಗಳು ಆರಂಭವಾಗುತ್ತವೆ. ಈ ವಯಸ್ಸು ತುಂಬಾ ಸೂಕ್ಷ್ಮ ಕೂಡಾ ಹೌದು. ಹೀಗಾಗಿ, ಮಕ್ಕಳಿಗೆ ತನ್ನ ತಪ್ಪನ್ನು ಸ್ನೇಹಿತರಂತೆ ವಿವರಿಸುವ ಮೂಲಕ ತಿಳಿ ಹೇಳಬಹುದು.