ಕೇಸರಿ ಹೂವು ಪ್ರಯೋಜನಗಳು!
ಸಿಹಿ ತಿಂಡಿ ಮಾಡುವಾಗ ಬಣ್ಣಕ್ಕಾಗಿ ಬಳಸುವ ಕೇಸರಿ ದಳದ ಬಗ್ಗೆ ನಾವು ಕೇಳಿರುತ್ತೇವೆ. ಕೇಸರಿ ಹೂನಿಂದ ತಯಾರಿಸಲಾದ ಈ ಕೇಸರಿಯನ್ನು ಗರ್ಭಿಣಿಯರು ಪ್ರತಿದಿನ ಹಾಲಿನಲ್ಲಿ ಒಂದು ಚಿಟಿಕೆ ಬೆರೆಸಿ ಸೇವಿಸಿದರೆ ಮಗು ಒಳ್ಳೆಯ ಬಣ್ಣದಿಂದ ಜನಿಸುತ್ತದೆ ಎಂದು ಹೇಳಲಾಗುತ್ತದೆ. ಒಂದಲ್ಲಾ ಎರಡಲ್ಲಾ ಈ ಕೇಸರಿ ಹೂವಿನಿಂದ ಇನ್ನೂ ಸಾಕಷ್ಟು ಪ್ರಯೋಜನಗಳಿವೆ.
ಕೇಸರಿ, ನೋಡಲು ದಾರದಂತೆ ಇರುತ್ತದೆ. ಇದನ್ನು ಹೆಚ್ಚಾಗಿ ಕಾಶ್ಮೀರ ಕಣಿವೆಯಲ್ಲಿ ಬೆಳೆಸಲಾಗುತ್ತದೆ. ಈ ಹೂವು ಒಣಗಿದಾಗ ಬಹಳ ದುಬಾರಿ ಮೂಲಿಕೆಯಾಗುತ್ತದೆ. ಗುಣಮಟ್ಟದ ಕೇಸರಿ ಬೆಲೆ, ಕೆಜಿಗೆ ಸುಮಾರು ಲಕ್ಷ ರೂಪಾಯಿ. ಆದರೆ ಇದನ್ನು ಚಿಟಿಕೆ ಬಳಸಿದರೆ ಸಾಕು, ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನ ದೊರೆಯುತ್ತದೆ.
ಹಾಲಿನಲ್ಲಿ ಒಂದು ಚಿಟಿಕೆ ಕೇಸರಿ ಮಿಕ್ಸ್ ಮಾಡಿ ಕುಡಿಯುವುದರಿಂದ ನರಮಂಡಲವನ್ನು ಬಲಪಡಿಸುತ್ತದೆ, ಮೆದುಳಿಗೆ ಆಕ್ಸಿಡೇಟಿವ್ ಹಾನಿಯನ್ನು ತಡೆಯುತ್ತದೆ ಮತ್ತು ಆಲ್ಝೈಮರ್ನಂತಹ ಕಾಯಿಲೆಗಳನ್ನು ತಡೆಯುತ್ತದೆ. ಬಿರಿಯಾನಿಗೆ ಕೂಡಾ ಕೆಲವೆಡೆ ಕೇಸರಿ ಸೇರಿಸುತ್ತಾರೆ.
ನೀವು ಕೇಸರಿ ಚಹಾದ ಬಗ್ಗೆ ಕೇಳಿದ್ದೀರಾ..? ನಿಜವಾದ ಕೇಸರಿಯಿಂದ ಮಾಡಿದ ಚಹಾವನ್ನು ಕುಡಿಯುವುದರಿಂದ ಮನಸ್ಥಿತಿ ಸುಧಾರಿಸುತ್ತದೆ ಎಂದು ಅಧ್ಯಯನದಿಂದ ಸಾಬೀತಾಗಿದೆ. ಕೇವಲ 30 ಮಿಲಿ ಗ್ರಾಂ ಕೇಸರಿ ನಿಮ್ಮ ಚಿತ್ತವನ್ನು ಉತ್ತಮವಾಗಿರಿಸುತ್ತದೆ.
ಪ್ರೀ ಮೆನ್ಸ್ಟ್ರುವಲ್ ಸಿಂಡ್ರೋಮ್ ಅಥವಾ ಮಹಿಳೆಯರ ಕೆಲವೊಂದು ಸಮಸ್ಯೆಗಳನ್ನು ನಿವಾರಿಸಲು ಕೇಸರಿ ಬಹಳ ಪ್ರಯೋಜನಕಾರಿಯಾಗಿದೆ. ಮಹಿಳೆಯರ ಜನನಾಂಗದ ಸಮಸ್ಯೆಗಳಿಗೂ ಈ ಮೂಲಿಕೆ ಪ್ರಯೋಜನಕಾರಿ.
ದೇಹದಲ್ಲಿನ ಹೆಚ್ಚುವರಿ ಕೊಬ್ಬನ್ನು ಕಡಿಮೆ ಮಾಡಲು ಕೇಸರಿ ಬಹಳ ಸಹಾಯ ಮಾಡುತ್ತದೆ. ಇದು ದೇಹದಲ್ಲಿ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ. ಪ್ರತಿದಿನದ ಆಹಾರದಲ್ಲಿ ಇದನ್ನು ಸೇವಿಸಿದರೆ ತೂಕ ನಷ್ಟವಾಗಲು ಸಹಾಯ ಮಾಡುತ್ತದೆ.
ಕೇಸರಿಯಲ್ಲಿ ಉತ್ಕರ್ಷಣ ನಿರೋಧಕ ಅಂಶ ಸಮೃದ್ಧವಾಗಿದೆ. ಇದು ಚರ್ಮದ ಆರೋಗ್ಯವನ್ನು ಸುಧಾರಿಸುತ್ತದೆ. ನಿಮ್ಮ ತ್ವಚೆಗೆ ನೈಸರ್ಗಿಕ ಹೊಳಪು ನೀಡುತ್ತದೆ.
ಪುರುಷರು ಹಾಗೂ ಮಹಿಳೆಯರ ಲೈಂಗಿಕ ಸಮಸ್ಯೆಯನ್ನು ಈ ಕೇಸರಿ ದೂರ ಮಾಡುತ್ತದೆ. ರಾತ್ರಿ ವೇಳೆ ಪುರುಷರಾಗಲೀ, ಮಹಿಳೆಯರಾಗಲೀ ಹಾಲಿನಲ್ಲಿ ಕೇಸರಿ ಬೆರೆಸಿ ಕುಡಿಯುವುದರಿಂದ ಲೈಂಗಿಕ ಸಾಮರ್ಥ್ಯ ಹೆಚ್ಚಾಗುತ್ತದೆ ಎಂದು ಅಧ್ಯಯನ ಹೇಳುತ್ತದೆ.