ಎಣ್ಣೆ ಸ್ನಾನ ಮಾಡೋದ್ರಿಂದ ಏನಾಗತ್ತೆ? ಸತ್ಯ ಗೊತ್ತಾದ್ರೆ ಇನ್ಯಾವತ್ತೂ ಬೇಡ ಅನ್ನಲ್ಲ!
ಹಬ್ಬದ ದಿನಗಳಲ್ಲಿ ಆದಷ್ಟು ಬೇಗ ಎದ್ದು ದೇವರಿಗೆ ಕೈ ಮುಗಿದು ನಿತ್ಯಕರ್ಮಗಳನ್ನು ಮುಗಿಸಿ ನಂತರ ಎಣ್ಣೆ ಸ್ನಾನಕ್ಕೆ ತಯಾರಿ ಮಾಡಿಕೊಳ್ಳುವುದು. ಇದು ಹಿಂದೂಗಳ ಸಂಸ್ಕೃತಿಯಲ್ಲಿ ಇದುವರೆಗೂ ನಡೆದುಕೊಂಡು ಬಂದಿರುವ ಸಂಪ್ರದಾಯ. ಕೇವಲ ಯುಗಾದಿ ಮತ್ತು ದೀಪಾವಳಿ ಹಬ್ಬಗಳು ಮಾತ್ರ ಎಣ್ಣೆ ಸ್ನಾನಕ್ಕೆ ಸೀಮಿತ ಎಂದು ಭಾವಿಸುವವರಿಗೆ ನಮ್ಮದೊಂದು ಕಿವಿಮಾತು. ಎಣ್ಣೆ ಸ್ನಾನ ದೇಹಕ್ಕೆ ತಂಪನ್ನು ಒದಗಿಸುವುದಲ್ಲದೆ, ಕಣ್ಣುಗಳಿಗೆ ಮತ್ತು ನಿಮ್ಮ ದೇಹದ ಮೇಲಿನ ಚರ್ಮಕ್ಕೆ ಆರೋಗ್ಯದ ವಿಷಯದಲ್ಲಿ ಬಹಳ ಪ್ರಯೋಜನಕಾರಿಯೂ ಆಗಿ ನಿಮ್ಮ ದೇಹದ ರಕ್ತದ ಒತ್ತಡವನ್ನು ಕಡಿಮೆ ಮಾಡುತ್ತದೆ.
ಅದರಲ್ಲೂ ಸ್ಕ್ರಬ್ ನ ಜೊತೆಯಲ್ಲಿ ಉಪಯೋಗಿಸಿದರೆ ಚರ್ಮದ ಮೇಲಿನ ನಿರುಪಯುಕ್ತ ಸತ್ತ ಜೀವ ಕೋಶಗಳನ್ನು ಚರ್ಮದಿಂದ ನಿವಾರಣೆ ಮಾಡಿ ಚರ್ಮದ ಕಾಂತಿಯನ್ನು ಹೆಚ್ಚಿಸಿ ಆರೋಗ್ಯವನ್ನು ವೃದ್ಧಿಗೊಳಿಸುತ್ತದೆ. ಆದ್ದರಿಂದ ಇಷ್ಟೆಲ್ಲಾ ಒಳ್ಳೆಯ ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ಎಣ್ಣೆ ಸ್ನಾನವನ್ನು ಕೇವಲ ಎರಡು ಹಬ್ಬಗಳಿಗೆ ಸೀಮಿತಗೊಳಿಸಿದರೆ ಏನು ಪ್ರಯೋಜನ ಹೇಳಿ.
ಪ್ರತಿಯೊಬ್ಬ ಮನುಷ್ಯ ತಾನು ಗಂಡಾಗಲೀ ಅಥವಾ ಹೆಣ್ಣಾಗಲೀ, ಯಾವ ವಯಸ್ಸಿನವರೇ ಆಗಲೀ ಅಂದರೆ ಮಕ್ಕಳೂ ಸೇರಿ ದೊಡ್ಡವರು, ವೃದ್ಧರು, ಆರೋಗ್ಯವಾಗಿರುವವರು, ರೋಗಿಗಳು ಹೀಗೆ ಎಲ್ಲರೂ ಕೂಡ ಎಣ್ಣೆ ಸ್ನಾನವನ್ನು ನಿಯಮಿತ ವಾಗಿಮಾಡುತ್ತಾ ಬಂದಿದ್ದೇ ಆದರೆ ಅದರ ಫಲಿತಾಂಶ ಮತ್ತು ಅವರ ಆರೋಗ್ಯದಲ್ಲಿ ಆಗುವ ಬದಲಾವಣೆ ಅವರಿಗೆ ತನ್ನಿಂತಾನೇ ಅರಿವಿಗೆ ಬರುತ್ತದೆ.
ಹಿಂದೂಗಳ ಪದ್ದತಿಯಂತೆ ಮತ್ತು ಆಯುರ್ವೇದ ದಲ್ಲಿ ಉಲ್ಲೇಖವಿರುವಂತೆ ಸಂಸ್ಕೃತ ಭಾಷೆಯಲ್ಲಿ ” ತೈಲ ಸ್ನಾನಂ ” ಎಂದು ಕರೆಯಲ್ಪಡುವ ಈ ಎಣ್ಣೆ ಅಭ್ಯಂಜನವನ್ನು ಆದಷ್ಟು ಚಾಂದ್ರ ದಿವಸಗಳು ಅಥವಾ ಚಂದ್ರನಿಗೆ ಪೂರಕವಾದ ದಿನಗಳು ಎಂದು ಗಣನೆಗೆ ತೆಗೆದುಕೊಳ್ಳುವ ಶನಿವಾರ, ಸೋಮವಾರ, ಬುಧವಾರ ಮತ್ತು ಶುಕ್ರವಾರಗಳಂದು ಪಾಲಿಸಿದರೆ ಉತ್ತಮ ಫಲಗಳು ಲಭ್ಯವಾಗುವವು ಎಂಬ ನಂಬಿಕೆ ಇದೆ. ಆದಷ್ಟು ತೈಲ ಸ್ನಾನವನ್ನು ಸೂರ್ಯನಿಗೆ ಪೂರಕವಾದ ರವಿವಾರ, ಮಂಗಳವಾರ ಮತ್ತು ಗುರುವಾರಗಳಂದು ಮಾಡದಿದ್ದರೆ ಕ್ಷೇಮ ಎಂದು ಸೂಚಿಸಲಾಗಿದೆ.
ಇನ್ನು ಆಶ್ವಯುಜ ಮಾಸದ 14 ನೇ ದಿನದಂದು ನಸುಕಿನ ವೇಳೆಯಲ್ಲಿ ತೈಲ ಅಭ್ಯಂಜನ ಸೂಕ್ತವೆಂಬ ಪ್ರತೀತಿ ಇದೆ. ಒಂದು ವೇಳೆ ಅಶ್ವಯುಜ ಕೃಷ್ಣ ಚತುರ್ದಶಿ ಯು ರವಿವಾರದಂದು ಬಂದರೆ, ಸ್ವಾತಿ ನಕ್ಷತ್ರದ ದಿನವಾದ್ದರಿಂದ ಸುವಾಸನಾಭರಿತ ಎಣ್ಣೆ ಸ್ನಾನ ಬಹಳ ಒಳ್ಳೆಯದು ಎಂದು ಉಲ್ಲೇಖಿಸ ಲಾಗಿದೆ. ಮೈ ಕೈಗೆಲ್ಲಾ ಎಣ್ಣೆ ಹಚ್ಚಿಕೊಂಡು ಸ್ವಲ್ಪ ಹೊತ್ತಿನ ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿದರೆ ಒಳ್ಳೆಯ ಫಲಗಳು ಲಭಿಸಲಿವೆ ಎಂದು ಜ್ಯೋತಿಷಿಗಳು ಹೇಳುತ್ತಾರೆ. ಏಕೆಂದರೆ ಭಾರತೀಯ ಹಿಂದೂ ಸಂಸ್ಕೃತಿಯಲ್ಲಿ ಲಕ್ಷ್ಮಿ ದೇವಿ ಎಣ್ಣೆಯಲ್ಲಿ ನೆಲೆಸಿದರೆ,ಗಂಗಾ ಮಾತೆ ನೀರಿನಲ್ಲಿ ನೆಲೆಗೊಂಡಿರುತ್ತಾಳೆ. ಆದ್ದರಿಂದ ಎಣ್ಣೆ ಮತ್ತು ನೀರಿನ ಮಿಶ್ರಣದಲ್ಲಿ ಸ್ನಾನ ಮಾಡಿದ್ದೇ ಆದರೆ ಮನುಷ್ಯನ ಸಕಲ ಪಾಪ ಕರ್ಮಗಳು ಕಳೆದು ಹೋಗುತ್ತವೆ ಎಂಬ ನಂಬಿಕೆ ಈಗಲೂ ಇದೆ.
ಕೆಲವು ಧರ್ಮಗ್ರಂಥಗಳ ಪ್ರಕಾರ ನಿರ್ಧಿಷ್ಟವಾದ ಪವಿತ್ರ ದಿನಗಳಲ್ಲಿ ಎಣ್ಣೆ ಸ್ನಾನ ನಿಷೇಧಿಸಲಾಗಿದೆ. ಆದರೆ ದೀಪಾವಳಿ ಇದರಿಂದ ಹೊರತಾಗಿದೆ. ಇದಕ್ಕೆ ಕಾರಣ ಶ್ರೀ ಕೃಷ್ಣ ಪರಮಾತ್ಮನು ನೀಡಿದ ಆ ಒಂದು ವರ, ಏನೆಂದರೆ ” ನರಕಾಸುರನ ವಧೆಯ ದಿವಸವಾದ ಇಂದು ಇದರ ನೆನಪಿನಲ್ಲಿ ಅಂದರೆ ನರಕ ಚತುರ್ದಶಿಯ ದಿನ ಪ್ರತಿಯೊಬ್ಬರೂ ಎಣ್ಣೆ ಸ್ನಾನ ಮಾಡಬೇಕೆಂಬ ನನ್ನ ವರ ಸೂರ್ಯ ಚಂದ್ರರು ಇರುವವರೆಗೂ ಶಾಶ್ವತ ಆಗಿರಲಿ ” ಎಂದು.
ಎಣ್ಣೆ ಸ್ನಾನ ಮಾಡುವುದಾದರೂ ಹೇಗೆ?
ಇದು ಹಬ್ಬದ ಸಂಪ್ರದಾಯವಾಗಿರುವುದರಿಂದ ಎಣ್ಣೆ ಸ್ನಾನಕ್ಕೆ ತನ್ನದೇ ಆದ ಪದ್ದತಿಯಿದೆ ಮತ್ತು ಮೇಲೆ ಹೇಳಿದ ಹಾಗೆ ಮನುಷ್ಯನ ಎಲ್ಲ ಪಾಪ ಕರ್ಮಗಳು ಕಳೆಯಬೇಕೆಂದರೆ, ಈ ಪದ್ದತಿಯನ್ನು ಪ್ರತಿಯೊಬ್ಬರೂ ಹಬ್ಬದ ಆಚರಣೆಯ ಮುನ್ನ ಅನುಸರಿಸಲೇಬೇಕು.
ಮೊದಲಿಗೆ ಒಂದು ಬಟ್ಟಲಿನಲ್ಲಿ ಕೊಬ್ಬರಿ ಎಣ್ಣೆ ಅಥವಾ ಎಳ್ಳಿನ ಎಣ್ಣೆ ಯನ್ನು ತೆಗೆದುಕೊಂಡು ತಲೆಯ ಕೂದಲಿನಿಂದ ಹಿಡಿದು ಕಾಲಿನ ಹೆಬ್ಬೆರಳಿನವರೆಗೆ ಸಂಪೂರ್ಣವಾಗಿ ಹಚ್ಚಿ ಮಸಾಜ್ ಮಾಡಬೇಕು. ಪ್ರಾರಂಭದಲ್ಲಿ ತಲೆಗೆ ಸ್ವಲ್ಪವೇ ಎಣ್ಣೆ ಹಾಕಿಕೊಂಡು ಮಸಾಜ್ ಮಾಡಿ ನಂತರ ನಿಧಾನವಾಗಿ ಎಣ್ಣೆಯ ಪ್ರಮಾಣವನ್ನು ಜಾಸ್ತಿ ಮಾಡಿಕೊಳ್ಳುತ್ತಾ ಬರಬೇಕು.
ನಂತರ ಎಣ್ಣೆಯನ್ನು ನಿಧಾನವಾಗಿ ಮುಖ, ಕಣ್ಣುಗಳು, ಮೂಗಿನ ಒಳ್ಳೆಗಳು, ಕೂದಲಿನ ಭಾಗ, ಕಿವಿಗಳು, ಕಂಕುಳಿನ ಭಾಗ, ಹೊಟ್ಟೆಯ ಭಾಗ, ಸೊಂಟದ ಭಾಗ ಮತ್ತು ಕಾಲುಗಳ ಭಾಗ. ಹೀಗೆ ಎಲ್ಲಾ ಕಡೆಯಲ್ಲೂ ಹರಡುವಂತೆ ಚೆನ್ನಾಗಿ ಹಚ್ಚಬೇಕು.
ಇದೇ ರೀತಿ ನಿಮ್ಮ ಸಂಪೂರ್ಣ ದೇಹ ಎಣ್ಣೆಯಿಂದ ಆವೃತವಾಗುವಂತೆ ಗಮನ ವಹಿಸಿ. ಆದರೆ ಒಂದು ಅಂಶ ಇಲ್ಲಿ ನೆನಪಿನಲ್ಲಿಡಿ. ನಿಮ್ಮ ದೇಹದ ಇತರ ಭಾಗಗಳಿಗೆ ಎಣ್ಣೆ ಹಚ್ಚಬೇಕಾದ ಸಮಯದಲ್ಲಿ ಎಣ್ಣೆ ಸಾಲದೇ ಬಂದರೆ ಮತ್ತಷ್ಟು ಎಣ್ಣೆಯನ್ನು ಕೈಗೆ ತೆಗೆದುಕೊಂಡು ಹಚ್ಚಬೇಕೇ ಹೊರತು ಯಾವುದೇ ಕಾರಣಕ್ಕೂ ತಲೆಯಲ್ಲಿ ಇರುವ ಎಣ್ಣೆಯನ್ನು ಹಿಂದಿ ತೆಗೆದು ಇತರ ಭಾಗಕ್ಕೆ ಸರಿ ಹೊಂದುವಂತೆ ಮಾಡಬಾರದು.ಸುಮಾರು 30 ರಿಂದ 45 ನಿಮಿಷಗಳವರೆಗೆ ಹಾಗೆ ಬಿಡಿ..ಈಗ ಉಗುರು ಬೆಚ್ಚಗಿನ ನೀರನ್ನು ಸಿದ್ಧಪಡಿಸಿಕೊಂಡು ಮೊದಲಿಗೆ ತಲೆಯನ್ನು ನೆನೆಸಿ ಶೀಗೆಕಾಯಿಯ ಸಹಾಯದಿಂದ ಎಣ್ಣೆಯ ಜಿಡ್ಡನ್ನು ತೊಳೆದುಕೊಳ್ಳಬೇಕು.
ಎಣ್ಣೆ ಸ್ನಾನ ಮಾಡಲು ಯಾವ ಸಮಯ ಸೂಕ್ತ?
ಸೂರ್ಯ ಉದಯಿಸಿದ ಮೂರು ಗಂಟೆಗಳ ಒಳಗೆ ತೈಲ ಅಭ್ಯಂಜನ ಸೂಕ್ತ ಎಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ.
ಎಣ್ಣೆ ಸ್ನಾನಕ್ಕೆ ಬಳಸುವ ಎಣ್ಣೆಯ ಪ್ರಮಾಣ ಈ ರೀತಿಯ ಮಿಶ್ರಣದಲ್ಲಿದ್ದರೆ ಬಹಳ ಒಳ್ಳೆಯದು : 50 % ತಾಜಾ ತೆಂಗಿನ ಎಣ್ಣೆ ಅಥವಾ ಕೊಬ್ಬರಿ ಎಣ್ಣೆ + 40 % ಎಳ್ಳಿನ ಎಣ್ಣೆ + 10 % ಸಾಸಿವೆ ಎಣ್ಣೆ.
ಎಣ್ಣೆ ಮಜ್ಜನದಿಂದ ಆಗುವ ಇನ್ನಿತರ ಆರೋಗ್ಯ ಪ್ರಯೋಜನಗಳು
ಮನುಷ್ಯನ ದೇಹಕ್ಕೆ ಎಣ್ಣೆ ಸ್ನಾನದಿಂದ ಹಲವಾರು ರೀತಿಯ ಅದ್ಭುತವೆನಿಸುವ ಪ್ರಯೋಜನಗಳಿವೆ. ಅವುಗಳನ್ನು ಒಂದೊಂದಾಗಿ ನೋಡೋಣ: –
ಎಣ್ಣೆ ಸ್ನಾನದಿಂದ ದೇಹದಲ್ಲಿ ಸೇರುವ ಜಿಡ್ಡಿನ ಅಂಶಗಳನ್ನು ತೆಗೆದುಹಾಕುತ್ತದೆ ಮತ್ತು ಅದರ ಜೊತೆಯಲ್ಲೇ ದೇಹದಲ್ಲಿ ಉದ್ಭವಿಸುವ ಉಷ್ಣಾಂಶವನ್ನು ದೇಹದಿಂದ ಹೊರಹಾಕುತ್ತದೆ. ಇದರಿಂದ ಮನುಷ್ಯನ ದೇಹದ ರಕ್ಷಾ ಕವಚದಂತಿರುವ ರೋಗ ನಿರೋಧಕ ಶಕ್ತಿ ಬಲಗೊಳ್ಳುತ್ತದೆ ಹಾಗೂ ಮನುಷ್ಯನ ಆತ್ಮ ಶಕ್ತಿ ಉತ್ತಮಗೊಂಡು ಸಮೃದ್ಧಿ ಮತ್ತು ಆಧ್ಯಾತ್ಮಿಕ ಶಕ್ತಿಯನ್ನು ಸೆಳೆಯಲು ನೆರವಾಗುತ್ತದೆ.
ಹಲವಾರು ರೀತಿಯ ಕಾಯಿಲೆಗಳಾದ ಮೈಗ್ರೇನ್ ( ವಿಪರೀತ ಮತ್ತು ಆಗಾಗ ಕಾಡುವ ತಲೆ ನೋವು ), ಮಾನಸಿಕ ಖಿನ್ನತೆ, ಹೊಟ್ಟೆಯ ಅಥವಾ ಜಠರದ ಅಸ್ವಸ್ಥತೆ, ಮಧುಮೇಹ, ಲೈಂಗಿಕ ಅಸ್ವಸ್ಥತೆ, ಅರಿಶಿನ ಕಾಮಾಲೆ, ಕ್ಯಾನ್ಸರ್ ಮತ್ತು ಇನ್ನಿತರ ವೈರಲ್ ಕಾಯಿಲೆಗಳು ಗುಣ ಕಾಣುತ್ತವೆ.
ನಿರಂತರವಾದ ತೈಲದ ಉಜ್ಜುವಿಕೆಯು ದೇಹದ ಅಂದವನ್ನು ಹೆಚ್ಚಿಸಿ ಚರ್ಮದ ವಿನ್ಯಾಸವನ್ನು ಉತ್ತಮಗೊಳಿಸುತ್ತದೆ.
ಕೂದಲಿನ ಆರೋಗ್ಯದ ರಕ್ಷಣೆ ಎಣ್ಣೆ ಸ್ನಾನಕ್ಕೆ ಬಿಟ್ಟ ವಿಚಾರವೇ ಹೌದು.
ಕಣ್ಣುಗಳ ಆರೋಗ್ಯನ್ನು ಕಾಪಾಡಿ ದೃಷ್ಟಿಯನ್ನು ಉತ್ತಮಗೊಳಿಸಿ ಕಣ್ಣಿನಲ್ಲಿರುವ ಕಡ್ಡಿ ಕಸಗಳನ್ನು ಸುಲಭವಾಗಿ ಹೊರಗೆ ತೆಗೆಯುತ್ತದೆ.ದೇಹದ ನರಮಂಡಲಗಳಿಗೆ ಎಣ್ಣೆಯ ಮಸಾಜ್ ನಿಂದ ಬಹಳ ಒಳ್ಳೆಯ ಪ್ರಯೋಜನ ಸಿಗುತ್ತದೆ ಎಂದು ಸಾಬೀತು ಪಡಿಸಿದೆ.
ಎಣ್ಣೆ ಸ್ನಾನದಿಂದ ಮೊಣಕೈ, ಮೊಣಕಾಲುಗಳು, ಪಾದಗಳು ಮತ್ತು ಕೈಗಳ ಮೇಲೆ ಸಹಜವಾಗಿಯೇ ಒಣ ಚರ್ಮ ಉಂಟಾಗುವುದು ತಪ್ಪುತ್ತದೆ.ಕಷ್ಟದ ಕೆಲಸ ಮಾಡಿ ಆಯಾಸದಿಂದ ಬಳಲಿರುವ ದೇಹಕ್ಕೆ ಮತ್ತು ದೇಹದ ನಿಶ್ಯಕ್ತಿಯಿಂದ ಕೂಡಿರುವ ಮಾಂಸಖಂಡಗಳಿಗೆ ಎಣ್ಣೆ ಸ್ನಾನ ಪುನಶ್ಚೇತನ ನೀಡಿ ಶಕ್ತಿಯನ್ನು ಕೊಡುತ್ತದೆ.
ನಿಯಮಿತವಾದ ಎಣ್ಣೆ ಸ್ನಾನ ಬಾಣಂತಿಯರಿಗೆ ಹಾಲಿನ ಉತ್ಪಾದನೆಯನ್ನು ಜಾಸ್ತಿ ಮಾಡುತ್ತದೆ.ಯಾವುದೇ ರೀತಿಯ ಮಾನಸಿಕ ಮತ್ತು ದೈಹಿಕ ಒತ್ತಡವನ್ನು ಸಂಪೂರ್ಣವಾಗಿ ನಿವಾರಿಸುವಲ್ಲಿ ತೈಲ ಅಭ್ಯಂಜನ ಬಹಳ ಸಹಕಾರಿ ಎನಿಸಿದೆ.