ಶಬರಿಯಂತೆ 30 ವರ್ಷದಿಂದ ರಾಮ ಮಂದಿರಕ್ಕೆ ಕಾಯುತ್ತಿರುವ ಅಜ್ಜಿಯ ರೋಚಕ ಕಥೆ!

0 43

ಜಾರ್ಖಂಡ್‌ನ ಧನಬಾದ್‌ನ 85 ವರ್ಷದ ವೃದ್ಧೆಯೊಬ್ಬರು ಜ. 22ರಂದು ಅಯೋಧ್ಯಾದಲ್ಲಿ ರಾಮಮಂದಿರ ಉದ್ಘಾಟನೆಯಾದ ಬಳಿಕ ತಮ್ಮ ಮೌನ ವ್ರತ ಮುರಿಯಲಿದ್ದಾರೆ. ಇದರಲ್ಲೇನು ವಿಶೇಷ ಎನ್ನುತ್ತೀರಾ? 1990ರ ದಶಕದಲ್ಲಿ ಮೌನ ವ್ರತದ ಪ್ರತಿಜ್ಞೆ ಕೈಗೊಂಡ ಅವರು ರಾಮಮಂದಿರ ನಿರ್ಮಾಣವಾಗುವವರೆಗೂ ಅದನ್ನು ಪಾಲಿಸುವುದಾಗಿ 30 ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದಾರೆ.

ಶ್ರೀರಾಮನ ಅಪ್ಪಟ ಭಕ್ತೆಯೊಬ್ಬರು ಜನವರಿ 22ರಂದು ಅಯೋಧ್ಯಾದಲ್ಲಿ ರಾಮ ಮಂದಿರ ಉದ್ಘಾಟನೆಯಾದ ಬಳಿಕ ತಮ್ಮ 30 ವರ್ಷಗಳ ಸುದೀರ್ಘ ಕಾಲದ ಮೌನ ವ್ರತವನ್ನು ಅಂತ್ಯಗೊಳಿಸಲಿದ್ದಾರೆ. ಜಾರ್ಖಂಡ್‌ನ ಧನಬಾದ್ ನಿವಾಸಿಯಾಗಿರುವ 85 ವರ್ಷದ ಮಹಿಳೆ, 1990ರ ದಶಕದ ಆರಂಭದಲ್ಲಿ ವಿವಾದಿತ ಬಾಬ್ರಿ ಮಸೀದಿ ಧ್ವಂಸಗೊಂಡ ಸಂದರ್ಭದಿಂದ ಮೌನ ವ್ರತ ಆಚರಿಸುವ ಪ್ರತಿಜ್ಞೆ ಕೈಗೊಂಡಿದ್ದರು.

ಧನಬಾದ್‌ನ ಕರ್ಮತಾಂಡ ಗ್ರಾಮದಲ್ಲಿ ವಾಸವಾಗಿರುವ ಸರಸ್ವತಿ ದೇವಿ, ಆಧುನಿಕ ಕಾಲದ ಶಬರಿಯಂತೆ ಶ್ರೀರಾಮನ ಆಗಮನಕ್ಕಾಗಿ ಕಾದಿದ್ದಾರೆ. ರಾಮಮಂದಿರದಲ್ಲಿ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆಯಾದ ಬಳಿಕ, 1990ರಿಂದಲೂ ನಡೆಸಿಕೊಂಡು ಬಂದಿರುವ ಮೌನ ವ್ರತವನ್ನು ಕೊನೆಗೂ ಅಂತ್ಯಗೊಳಿಸಲು ಬಯಸಿದ್ದಾರೆ. ಈ ಮೂಲಕ ಅವರು ಶ್ರೀ ರಾಮನೆಡೆಗಿನ ಭಕ್ತಿ ಹಾಗೂ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗುವುದನ್ನು ನೋಡುವ ದೃಢ ಸಂಕಲ್ಪವನ್ನು ಪ್ರದರ್ಶಿಸಿದ್ದಾರೆ.

ರಾಮ ಮಂದಿರದ ನಿರ್ಮಾಣವಾಗುವುದು ಹಾಗೂ ಅದರಲ್ಲಿ ರಾಮಲಲ್ಲಾ ಪ್ರತಿಷ್ಠಾಪನೆಯಾಗುವ ದಿನದ ಬಳಿಕವಷ್ಟೇ ಮಾತನಾಡುವುದಾಗಿ ಸರಸ್ವತಿ ದೇವಿ ಶಪಥ ಮಾಡಿದ್ದರು.

ಮೂರು ವರ್ಷದಿಂದ ಸಂಪೂರ್ಣ ಮೌನ

ಅವರ ಮೌನ ವ್ರತದಲ್ಲಿ ಒಂದಷ್ಟು ಸಡಿಲಿಕೆಗಳಿದ್ದವು. 1990ರ ದಶಕದಲ್ಲಿ ಮೌನವ್ರತ ಆರಂಭಿಸಿದ ಅವರು, 2020ರವರೆಗೂ ಪ್ರತಿ ದಿನ ಮಧ್ಯಾಹ್ನ ಒಂದು ಗಂಟೆ ಅದಕ್ಕೆ ‘ವಿರಾಮ’ ನೀಡುತ್ತಿದ್ದರು. ಈ ಒಂದು ಗಂಟೆ ಅವಧಿಯಲ್ಲಿ ಮಾತ್ರ ಅವರು ಮಾತನಾಡುತ್ತಿದ್ದರು. ಆದರೆ 2020ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯಾದಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಸಂದರ್ಭದಿಂದ ಅವರು ಸಂಪೂರ್ಣ ಮೌನ ವ್ರತಕ್ಕೆ ಶರಣಾಗಿದ್ದಾರೆ.

ರಾಮ ಮಂದಿರ ನಿರ್ಮಾಣವಾಗಬೇಕು ಎಂಬ ಅವರ ಆಶಯ ಕೊನೆಗೂ ಈಡೇರುತ್ತಿದೆ. ಅದರಂತೆ ತಮ್ಮ ಮೌನ ವ್ರತವನ್ನು ಅಂತ್ಯಗೊಳಿಸಲು ಅವರು ನಿರ್ಧರಿಸಿದ್ದಾರೆ. ಅವರು ಮೌನ ಪಾಲಿಸುವ ಶಪಥವನ್ನು ಮುರಿಯುತ್ತಿರುವುದು ಕುಟುಂಬದವರಲ್ಲಿ ಆನಂದ ಹಾಗೂ ಕಾತರ ಮೂಡಿಸಿದೆ. ಕಳೆದ ಮೂರು ವರ್ಷಗಳಿಂದ ಒಮ್ಮೆಯೂ ಕೇಳದ ಕುಟುಂಬದ ಹಿರಿಯಳ ಧ್ವನಿಯನ್ನು ಮತ್ತೆ ಆಲಿಸುವ ಗಳಿಗೆಗಾಗಿ ಮನೆಯವರು ಕಾಯುತ್ತಿದ್ದಾರೆ.

ಉದ್ಘಾಟನೆ ಸಮಾರಂಭಕ್ಕೆ ಆಹ್ವಾನ

‘ಮೌನಿ ಮಾತಾ’ ಎಂದೇ ಹೆಸರಾಗಿರುವ ಸರಸ್ವತಿ ದೇವಿ ಮತ್ತು ಅವರ ಕುಟುಂಬಕ್ಕೆ ಭವ್ಯ ಮಂದಿರದ ಉದ್ಘಾಟನೆ ಸಮಾರಂಭಕ್ಕೆ ಆಗಮಿಸಲು ರಾಮ ಮಂದಿರ ಟ್ರಸ್ಟ್‌ ವಿಶೇಷ ಆಹ್ವಾನ ನೀಡಿದೆ.

ತಾವು ಹೇಳಲು ಬಯಸುವುದನ್ನೆಲ್ಲಾ ಕಾಗದದ ಮೇಲೆ ಗೀಚುವ ಅವರು, ಮೌನ ವ್ರತದ ಅವಧಿಯಲ್ಲಿ ಅಯೋಧ್ಯಾ, ಕಾಶಿ, ಮಥುರಾ, ತಿರುಪತಿ ಬಾಲಾಜಿ ಮತ್ತು ಬಾಬಾ ವೈದ್ಯನಾಥ ಧಾಮಗಳಿಗೆ ಭೇಟಿ ನೀಡಿದ್ದಾರೆ.

ರಾಮ ಮಂದಿರ ಉದ್ಘಾಟನೆಗೆ ಬಂದಿರುವ ಆಹ್ವಾನವನ್ನು ರಾಮನಿಂದಲೇ ಬಂದ ದೈವಿಕ ಕರೆ ಎಂದು ಪರಿಗಣಿಸಿರುವ ಸರಸ್ವತಿ ದೇವಿ, ಶ್ರೀ ರಾಮನ ಹೆಸರು ಹೇಳುವ ಮೂಲಕ ಮೌನ ಮುರಿಯಲು ನಿರ್ಧರಿಸಿದ್ದಾರೆ.

Leave A Reply

Your email address will not be published.