ಒಂದೇ ಒಂದು ಕಷಾಯ ನೂರು ರೋಗ ಗುಣ!
ಬೇವಿನ ಸೊಪ್ಪಿನ ಔಷಧೀಯ ಗುಣಗಳು ನಮಗೆ ಬಹಳ ಹಿಂದಿನಿಂದ ಚಿರಪರಿಚಿತ. ಏಕೆಂದರೆ ಪುಟ್ಟ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಚರ್ಮದ ವ್ಯಾಧಿಗಳನ್ನು ನೈಸರ್ಗಿಕವಾಗಿ ಗುಣ ಪಡಿಸುವ ಏಕೈಕ ಸಸ್ಯ ಪದಾರ್ಥ ಎಂದರೆ, ಮೊದಲಿಗೆ ನಮಗೆ ನೆನಪಿಗೆ ಬರುವುದು ಬೇವಿನ ಸೊಪ್ಪು.
ಮಧುಮೇಹ ಇರುವವರು, ರಕ್ತದ ಒತ್ತಡ ಇರುವವರು, ಹುಳುಕು ಹಲ್ಲು, ಕರುಳಿನ ಸಮಸ್ಯೆ ಹೊಂದಿರುವವರು ಬೆಳಗಿನ ಸಮಯದಲ್ಲಿ ಖಾಲಿ ಹೊಟ್ಟೆಯಲ್ಲಿ ಬೇವಿನ ಎಲೆಗಳನ್ನು ಜಿಗಿದು ತಿನ್ನುವ ಅಭ್ಯಾಸ ಮಾಡಿಕೊಳ್ಳಬೇಕು.
ಬೇವಿನ ಸೊಪ್ಪು ತನ್ನ ಕಹಿಯ ಸ್ವಭಾವದಿಂದ ಇಂದು ಹಲವಾರು ಔಷಧೀಯ ಉತ್ಪನ್ನ ತಯಾರಿಕಾ ಕಂಪನಿಗಳಲ್ಲಿ ಹಾಗೂ ಟೂತ್ಪೇಸ್ಟ್ ತಯಾರು ಮಾಡುವ ಉದ್ಯಮಗಳಲ್ಲಿ ಅತಿ ಹೆಚ್ಚಾಗಿ ಬಳಕೆಯಾಗುತ್ತಿದೆ.
ಬೇವಿನ ಎಲೆಗಳನ್ನು ಅಡುಗೆ ಮಾಡಿ ಕೂಡ ಸೇವಿಸಬಹುದು ಎನ್ನುವ ವಿಚಾರ ನಿಮಗೆ ಹೊಸದಂತೆ ಕಾಣಬಹುದು. ಆದರೆ ಇದು ನಿಜ. ಬೇವಿನ ಎಲೆಗಳನ್ನು ಚಟ್ನಿ ಮಾಡಲು ಹಾಗೂ ಇನ್ನೊಂದು ವಿಶೇಷ ಬಗೆಯ ಖಾದ್ಯ ತಯಾರು ಮಾಡಲು ಬಳಕೆ ಮಾಡುತ್ತಾರೆ ಇಲ್ಲಿದೆ ಅದರ ಪರಿಚಯ.
ಆರೋಗ್ಯದಲ್ಲಿ ಬೇವಿನ ಸೊಪ್ಪಿನ ಮರೆಯಲಾಗದ ಮಹತ್ತರ ಪಾತ್ರ
ಬೇವಿನ ಸೊಪ್ಪಿನಲ್ಲಿ ಆಂಟಿ – ಇಂಪ್ಲಾಮೇಟರಿ, ಆಂಟಿ – ಫಂಗಲ್ ಮತ್ತು ಆಂಟಿ – ಬ್ಯಾಕ್ಟೀರಿಯಲ್ ಗುಣ ಲಕ್ಷಣಗಳು ಇವೆಯೆಂದು ಆಯುರ್ವೇದ ಪಂಡಿತರು ಹೇಳುತ್ತಾರೆ.
ಹಾಗಾಗಿ ಬಹಳ ಹಿಂದಿನಿಂದ ತಮ್ಮ ಆಯುರ್ವೇದ ಪದ್ಧತಿಯಲ್ಲಿ ಕೆಲವೊಂದು ವಿಶೇಷ ಬಗೆಯ ಕಾಯಿಲೆಗಳನ್ನು ಗುಣ ಪಡಿಸುವುದಕ್ಕೆ ತಾವು ತಯಾರು ಮಾಡುವ ಔಷಧಿಗಳಲ್ಲಿ ಬೇವಿನ ಸೊಪ್ಪನ್ನು ಬಳಕೆ ಮಾಡುತ್ತಾ ಬಂದಿದ್ದಾರೆ.
ಇಂದಿಗೂ ಕೂಡ ಬೇವಿನ ಸೊಪ್ಪಿಗೆ ಔಷಧೀಯ ವಿಚಾರದಲ್ಲಿ ಅಷ್ಟೇ ಮೌಲ್ಯವಿದೆ. ಆದರೆ ನಮಗೆ ಇದುವರೆಗೂ ಕೇವಲ ಬೇವಿನ ಸೊಪ್ಪನ್ನು ರೋಗ ರುಜಿನಗಳನ್ನು ವಾಸಿ ಮಾಡುವ ಅದ್ಭುತ ಚಮತ್ಕಾರಿ ನೈಸರ್ಗಿಕ ಪದಾರ್ಥ ಎಂದು ಮಾತ್ರ ಗೊತ್ತಿತ್ತು.
ಆದರೆ ಬೇವಿನ ಸೊಪ್ಪನ್ನು ಬಳಸಿಕೊಂಡು ತಯಾರು ಮಾಡುವ ಕೆಲವೊಂದು ವಿಶೇಷ ಬಗೆಯ ಆಹಾರ ಪದಾರ್ಥಗಳು ನಮ್ಮ ದೇಹಕ್ಕೆ ಒಳ್ಳೆಯ ವಿಟಮಿನ್ ಅಂಶಗಳನ್ನು ಮತ್ತು ಖನಿಜಾಂಶಗಳನ್ನು ಒದಗಿಸುವುದು ಮಾತ್ರವಲ್ಲದೆ ಇವುಗಳಲ್ಲಿರುವ ಫ್ಯಾಟಿ ಆಸಿಡ್ ಮತ್ತು ಆಂಟಿ- ಆಕ್ಸಿಡೆಂಟ್ ಅಂಶಗಳು ನಮ್ಮ ದೇಹದ ಅಪೌಷ್ಟಿಕತೆಯನ್ನು ನಿವಾರಣೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.
ಮಧುಮೇಹವನ್ನು ಹೊಂದಿರುವ ವ್ಯಕ್ತಿಗಳಲ್ಲಿ ಬೇವಿನ ಸೊಪ್ಪು ನೈಸರ್ಗಿಕವಾಗಿ ಅವರ ದೇಹದ ಇನ್ಸುಲಿನ್ ಪ್ರಮಾಣವನ್ನು ಸಮತೋಲನ ಮಾಡಿ, ಕಣ್ಣಿನ ದೃಷ್ಟಿಯನ್ನು ಅಭಿವೃದ್ಧಿ ಪಡಿಸಿ ದೇಹದ ಜೀರ್ಣಾಂಗ ವ್ಯವಸ್ಥೆಯನ್ನು ಉತ್ತೇಜಿಸುವುದು ಮಾತ್ರವಲ್ಲದೆ ಚರ್ಮದ ಹಲವಾರು ಸಮಸ್ಯೆಗಳನ್ನು ದೂರ ಮಾಡುತ್ತದೆ.
ಬೇವಿನ ಸೊಪ್ಪನ್ನು ಅಡುಗೆ ಮಾಡಲು ಬಳಸುತ್ತಾರೆ
ಬೇವಿನ ಸೊಪ್ಪಿನಿಂದ ಕೆಲವು ಬಗೆಯ ಆಹಾರ ಪದಾರ್ಥಗಳನ್ನು ತಯಾರು ಮಾಡಿ ಸೇವಿಸುವುದು ಕೇಳುವವರಿಗೆ ಸ್ವಲ್ಪ ಆಶ್ಚರ್ಯ ಎನಿಸಬಹುದು. ಆದರೆ ಬೇವಿನ ಸೊಪ್ಪಿನ ಖಾದ್ಯಗಳು ಇತ್ತೀಚಿನದೇನಲ್ಲ.
ಬಹಳ ಹಿಂದಿನಿಂದಲೂ ನಮ್ಮ ಹಿರಿಯರು ತಾಜಾ ಬೇವಿನ ಎಲೆಗಳಿಂದ ತಮ್ಮ ಆರೋಗ್ಯ ವೃದ್ಧಿಗಾಗಿ ಕೆಲವು ಬಗೆಯ ಆಹಾರ ಪದಾರ್ಥಗಳನ್ನು ತಯಾರು ಮಾಡಿ ಸೇವಿಸುತ್ತಿದ್ದರು. ಬೇವಿನ ಸೊಪ್ಪಿನಲ್ಲಿ ದೇಹದಲ್ಲಿ ಇರುವ ವಿಷಕಾರಿ ಅಂಶಗಳನ್ನು ತೆಗೆದು ಮೆಟಬಾಲಿಕ್ ಪ್ರಕ್ರಿಯೆಯನ್ನು ಹೆಚ್ಚು ಮಾಡುವಂತಹ ಗುಣ ಲಕ್ಷಣಗಳಿವೆ.
ಅದೂ ಅಲ್ಲದೆ ಬೇವಿನ ಸೊಪ್ಪು ನಮ್ಮ ದೇಹದಲ್ಲಿ ಅದರಲ್ಲೂ ವಿಶೇಷವಾಗಿ ಕರುಳಿನ ಭಾಗದಲ್ಲಿ ಕಂಡು ಬರುವ ಕೆಲವೊಂದು ಜಾತಿಯ ಹುಳುಗಳು ಮತ್ತು ಪರಾವಲಂಬಿ ಜೀವಿಗಳನ್ನು ನಾಶ ಪಡಿಸುತ್ತದೆ.
ಬೇವಿನ ಸೊಪ್ಪಿನ ಪ್ರಯೋಜನಗಳು
ನಮ್ಮ ದೇಹದ ತೂಕ ನಿರ್ವಹಣೆಯಲ್ಲಿ ಅದು ನಮ್ಮ ಜೀರ್ಣಾಂಗ ವ್ಯವಸ್ಥೆಯ ಅತ್ಯುತ್ತಮ ಕಾರ್ಯ ನಿರ್ವಹಣೆಯಲ್ಲಿ ಬೇವಿನ ಸೊಪ್ಪಿನ ಪಾತ್ರ ಮರೆಯುವಂತಿಲ್ಲ.ಅದೂ ಅಲ್ಲದೆ ಹುಳುಕು ಹಲ್ಲು ಸಮಸ್ಯೆಯನ್ನು ಹೊಂದಿದವರು ಅಥವಾ ಹಲ್ಲು ಮತ್ತು ವಸಡಿನ ಸಮಸ್ಯೆಯನ್ನು ಹೊಂದಿರುವವರು ಬೇವಿನ ಸೊಪ್ಪನ್ನು ಬೆಳಗಿನ ಖಾಲಿ ಹೊಟ್ಟೆಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ಜಗಿದು ತಿನ್ನುವ ಅಭ್ಯಾಸ ಮಾಡಿಕೊಳ್ಳಬೇಕು.
ಆರೋಗ್ಯ ತಜ್ಞರ ಪ್ರಕಾರ ಬೇವಿನ ಸೊಪ್ಪಿನಲ್ಲಿರುವ ನೈಸರ್ಗಿಕ ಔಷಧೀಯ ಅಂಶಗಳು ಹುಳುಕು ಹಲ್ಲಿನ ಒಳಗಿರುವ ಹುಳುಗಳನ್ನು ಕ್ರಮೇಣವಾಗಿ ಕೊಲ್ಲುತ್ತದೆ ಎಂದು ಹೇಳುತ್ತಾರೆ. ಅಷ್ಟೇ ಅಲ್ಲದೆ ಬೇವಿನ ಸೊಪ್ಪಿನಲ್ಲಿ ಆಂಟಿ – ಬ್ಯಾಕ್ಟೀರಿಯಲ್ ಮತ್ತು ಆಂಟಿ – ಫಂಗಲ್ ಗುಣ ಲಕ್ಷಣಗಳು ನೈಸರ್ಗಿಕವಾಗಿ ಕೂಡಿರುವುದರಿಂದ ನಮ್ಮ ಬಾಯಿಯ ಸ್ವಚ್ಛತೆಯ ಜೊತೆಗೆ ಆರೋಗ್ಯದ ಕಡೆಗೂ ಇದರ ಪ್ರಭಾವ ಇರುತ್ತದೆ.
ಒಟ್ಟಿನಲ್ಲಿ ಹೇಳುವುದಾದರೆ ಬೇವಿನಸೊಪ್ಪು ನಮಗೆ ಒಳ್ಳೆಯ ಆರೋಗ್ಯವನ್ನು ಒದಗಿಸುವಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ. ಬೇವಿನ ಎಲೆಗಳಿಂದ ಕೆಲವು ಆಹಾರ ಖಾದ್ಯಗಳನ್ನು ತಯಾರು ಮಾಡುವ ಬಗೆಯನ್ನು ಈಗ ನೋಡೋಣ…
ನೀಮ್ ಬೆಗನ್
ನೀಮ್ ಬೆಗನ್, ಇದೊಂದು ಬಂಗಾಳಿ ಅಡುಗೆಯಾಗಿದ್ದು, ಇದರಲ್ಲಿ ಬದನೆಕಾಯಿ ತುಂಡುಗಳನ್ನು ಸ್ವಲ್ಪ ಎಣ್ಣೆಯ ಜೊತೆಗೆ ಹುರಿಯಲಾಗುತ್ತದೆ.
ಅಲ್ಲಿನವರಿಗೆ ಇದೊಂದು ಸಾಂಪ್ರದಾಯಿಕ ಅಡುಗೆ ಪದ್ಧತಿ ಅನಿಸಿದ್ದು, ಯಾವುದಾದರೂ ವಿಶೇಷ ಸಂದರ್ಭಗಳಲ್ಲಿ ತಯಾರು ಮಾಡುವ ಈ ಆಹಾರ ಖಾದ್ಯವನ್ನು ಇತರ ಎಲ್ಲಾ ಆಹಾರಗಳಿಗಿಂತ ಮೊದಲೇ ಅನ್ನದ ಜೊತೆ ಬಡಿಸುತ್ತಾರೆ. ಇದನ್ನು ಸೇವಿಸಿದ ನಂತರವಷ್ಟೇ ಇತರ ಆಹಾರಗಳನ್ನು ಬಡಿಸಲು ಮುಂದಾಗುತ್ತಾರೆ.
ಅಲ್ಲಿನವರ ಆಹಾರ ಪದ್ಧತಿಯ ಹಾಗೂ ನಂಬಿಕೆಯ ಪ್ರಕಾರ ಈ ಆಹಾರ ದೇಹದಲ್ಲಿ ಜೀರ್ಣ ವ್ಯವಸ್ಥೆಯನ್ನು ಸರಿಯಾಗಿ ನಿರ್ವಹಣೆ ಮಾಡುವುದು ಮಾತ್ರವಲ್ಲದೆ ಉಳಿದ ಆಹಾರಗಳನ್ನು ಸೇವಿಸಿದ ನಂತರ ಅವುಗಳಲ್ಲಿ ಕಂಡು ಬರುವ ಪೌಷ್ಟಿಕ ಸತ್ವಗಳನ್ನು ದೇಹ ಚೆನ್ನಾಗಿ ಹೀರಿಕೊಳ್ಳುವಂತೆ ಸಹಾಯ ಮಾಡುತ್ತದೆ.
ನೀಮ್ ಬೆಗನ್ ತಯಾರು ಮಾಡಲು ಬೇಕಾಗಿರುವ ಸಾಮಗ್ರಿಗಳು
- 3 ಟೇಬಲ್ ಚಮಚ ಸಾಸಿವೆ ಎಣ್ಣೆ
- 2 ಕಪ್ ಹೆಚ್ಚಿದ ಬದನೆಕಾಯಿ
- 2 ಹಸಿ ಮೆಣಸಿನ ಕಾಯಿ
- 1 ಕಪ್ ಬೇವಿನ ಎಲೆಗಳು ( ತಾಜಾ )
- ಸ್ವಲ್ಪ ಅರಿಶಿಣ
- ಚಿಟಿಕೆ ಉಪ್ಪು
ನೀಮ್ ಬೆಗನ್ ತಯಾರು ಮಾಡುವ ವಿಧಾನ
ಮೊದಲು ಆಗ ತಾನೆ ಬಿಡಿಸಿಕೊಂಡು ಬಂದ ಬೇವಿನ ಎಲೆಗಳನ್ನು ನೀರಿನಲ್ಲಿ ಚೆನ್ನಾಗಿ ತೊಳೆಯಿರಿ
ಈಗ ಬೇವಿನ ಎಲೆಗಳನ್ನು ಸ್ವಲ್ಪ ನೀರಿಲ್ಲದಂತೆ ಚೆನ್ನಾಗಿ ಒಣಗಿಸಿ
ಹೆಚ್ಚಿದ ಬದನೆಕಾಯಿ ಹೋಳುಗಳಿಗೆ ಅರಿಶಿಣ ಮತ್ತು ಉಪ್ಪು ಮಿಶ್ರಣ ಮಾಡಿ
ಈಗ ಒಂದು ಪ್ಯಾನ್ ತೆಗೆದುಕೊಂಡು ಅದನ್ನು ಸ್ಟವ್ ಮೇಲಿಟ್ಟು ಸ್ವಲ್ಪ ಎಣ್ಣೆ ಹಾಕಿ ಬಿಸಿ ಮಾಡಿ
ಇದಕ್ಕೆ ಚೆನ್ನಾಗಿ ತೊಳೆದು ತೇವಾಂಶ ಒಣಗಿಸಿದ ತಾಜಾ ಬೇವಿನ ಎಲೆಗಳನ್ನು ಹಾಕಿ ಎಣ್ಣೆಯಲ್ಲಿ ಸ್ವಲ್ಪ ಹೊತ್ತು ಹುರಿಯಿರಿ.
ಬೇವಿನ ಎಲೆಗಳು ಕ್ರಿಸ್ಪಿ ಆಗುತ್ತಿದ್ದಂತೆ ಅವುಗಳನ್ನು ಒಂದು ಪ್ಲೇಟ್ ಗೆ ವರ್ಗಾಯಿಸಿ
ಈಗ ಮತ್ತೆ ಅದೇ ಪಾನ್ ಗೆ ಇನ್ನು ಸ್ವಲ್ಪ ಎಣ್ಣೆ ಹಾಕಿ, ಅದಕ್ಕೆ ಉಪ್ಪು ಮತ್ತು ಅರಿಶಿನ ಮಿಶ್ರಿತ ಬದನೆಕಾಯಿ ಹೋಳುಗಳನ್ನು ಹಾಕಿ ಚೆನ್ನಾಗಿ ಎಣ್ಣೆಯಲ್ಲಿ ಬೇಯಿಸಿ.
ಬದನೆಕಾಯಿ ಹುಳುಗಳು ಸ್ವಲ್ಪ ಕರಿದಂತೆ ಕಂಡು ಬಂದ ನಂತರ, ಹೆಚ್ಚಿದ ಹಸಿ ಮೆಣಸಿನಕಾಯಿ ಮತ್ತು ಮೊದಲೇ ಹುರಿದುಕೊಂಡ ಬೇವಿನ ಎಲೆಗಳನ್ನು ಹಾಕಿ ಎಲ್ಲವನ್ನೂ ಮತ್ತೊಮ್ಮೆ ಚೆನ್ನಾಗಿ ಮಿಶ್ರಣ ಮಾಡಿ.
ರುಚಿಗೆ ಬೇಕಾದಷ್ಟು ಉಪ್ಪನ್ನು ಹಾಕಿ ಬಿಸಿ ಇರುವಾಗಲೇ ಸವಿಯಲು ಕೊಡಿ
ಗಮನಿಸಬೇಕಾದ ಒಂದು ಅಂಶ
ನೀಮ್ ಬೆಗನ್ ಆಹಾರ ಪದಾರ್ಥದ ಪೌಷ್ಟಿಕ ಮೌಲ್ಯವನ್ನು ಹೆಚ್ಚಿಸಲು ನೀವು ಎಣ್ಣೆಯ ಬದಲು ಸ್ವಲ್ಪ ತುಪ್ಪವನ್ನು ಬಳಸಬಹುದು. ನೀಮ್ ಬೆಗನ್ ತಯಾರಿಕೆಯಲ್ಲಿ ಬಹಳಷ್ಟು ವಿಧಾನಗಳಿವೆ. ಆದರೆ ಎಲ್ಲ ವಿಧಾನಗಳಿಗೆ ಹೋಲಿಸಿದರೆ ಇದೊಂದು ಸುಲಭವಾದ ವಿಧಾನ.
ಬೇವಿನ ಸೊಪ್ಪಿನ ಚಟ್ನಿ
ನಮ್ಮ ಭಾರತೀಯ ಪದ್ಧತಿಯಲ್ಲಿ ಅದರಲ್ಲೂ ವಿಶೇಷವಾಗಿ ದಕ್ಷಿಣ ಭಾರತದಲ್ಲಿ ನಾವು ಹಲವಾರು ಬಗೆಯ ಚಟ್ನಿಗಳನ್ನು ನಮ್ಮ ಆಹಾರದ ಅವಶ್ಯಕತೆಗಳಿಗೆ ತಕ್ಕಂತೆ ತಯಾರು ಮಾಡುವ ವಿಧಾನವನ್ನು ಕಲಿತುಕೊಂಡಿದ್ದೇವೆ. ಬೇವಿನ ಸೊಪ್ಪಿನ ಚಟ್ನಿ ಕೂಡ ಇದಕ್ಕೆ ಹೊರತಲ್ಲ.
ಬೇವಿನ ಸೊಪ್ಪಿನ ಚಟ್ನಿ ತಯಾರು ಮಾಡಲು ಬೇಕಾಗಿರುವ ಸಾಮಗ್ರಿಗಳು : –
10 ರಿಂದ 12 ಬೇವಿನ ಎಲೆಗಳು
4 ಟೀ ಚಮಚ ಬೆಲ್ಲದ ಪುಡಿ
ಅರ್ಧ ಟೀ ಚಮಚ ಜೀರಿಗೆ
ರುಚಿಗೆ ತಕ್ಕಷ್ಟು ಉಪ್ಪು
4 – 5 ಕೊಕುಮ್
ಬೇವಿನ ಎಲೆಗಳ ಚಟ್ನಿ ತಯಾರು ಮಾಡುವ ವಿಧಾನ
ಮೊದಲಿಗೆ ತಾಜ ಬೇವಿನ ಎಲೆಗಳನ್ನು ಚೆನ್ನಾಗಿ ತೊಳೆದು ಹೆಚ್ಚಿರುವ ನೀರನ್ನು ಸ್ವಲ್ಪ ಬಟ್ಟೆಯಿಂದ ಒತ್ತಿಕೊಳ್ಳಿ
ಒಂದು ಮಿಕ್ಸರ್ ಜಾರ್ ಗೆ ಬೇವಿನ ಎಲೆಗಳು, ಕೋಕುಂ, ಜೀರಿಗೆ, ಬೆಲ್ಲ ಮತ್ತು ಉಪ್ಪು ಸೇರಿಸಿ ಸ್ವಲ್ಪ ನೀರನ್ನು ಮಿಶ್ರಣ ಮಾಡಿ ನಯವಾದ ಪೇಸ್ಟ್ ರೀತಿಯಲ್ಲಿ ರುಬ್ಬಿಕೊಳ್ಳಿ. ಇದನ್ನು ಒಂದು ಸರ್ವಿಂಗ್ ಬೌಲ್ ಗೆ ವರ್ಗಾಯಿಸಿ.
ಈಗ ಒಂದು ಸಣ್ಣ ಪ್ಯಾನ್ ತೆಗೆದುಕೊಂಡು ಅದಕ್ಕೆ 1 ಟೀ ಚಮಚ ತೆಂಗಿನ ಎಣ್ಣೆಯನ್ನು ಹಾಕಿ ಒಗ್ಗರಣೆಗೆ ಸ್ವಲ್ಪ ಸಾಸಿವೆ ಹಾಕಿ.
ಸಾಸಿವೆ ಕಾಳುಗಳು ಚಿಟಪಟ ಎಂದ ಮೇಲೆ ಅದಕ್ಕೆ ಸ್ವಲ್ಪ ಕರಿ ಬೇವು ಮತ್ತು ಒಂದು ಒಣ ಮೆಣಸಿನಕಾಯಿ ಹಾಕಿ.
20 ಸೆಕೆಂಡುಗಳು ಕಳೆದ ನಂತರ ನೀವು ತಯಾರು ಮಾಡಿಕೊಂಡ ಚಟ್ಟಿಯ ಮೇಲೆ ಇದನ್ನು ಸುರಿದು ಚೆನ್ನಾಗಿ ಮಿಶ್ರಣ ಮಾಡಿ ಸವಿಯಿರಿ.
ಬೇವಿನ ಚಹಾ
ಮೇಲಿನ ಬೇವಿನ ಎಲೆಯ ಖಾದ್ಯಗಳನ್ನು ತಯಾರು ಮಾಡಲು ನಿಮಗೆ ಸಾಧ್ಯ ಆಗದಿದ್ದರೆ, ಇದೊಂದು ಸುಲಭವಾದ ಪಾನೀಯವನ್ನು ನೀವು ಸೇವಿಸಬಹುದು. ಬೇವಿನ ಎಲೆಗಳ ಚಹ ತಯಾರು ಮಾಡುವ ಮತ್ತು ಸೇವಿಸುವ ಅಭ್ಯಾಸದಿಂದ ನಿಮ್ಮ ದೇಹದ ರೋಗ ನಿರೋಧಕ ವ್ಯವಸ್ಥೆ ಬಲಗೊಳ್ಳುತ್ತದೆ.
ಬೇವಿನ ಚಹ ತಯಾರು ಮಾಡಲು ಮೊದಲಿಗೆ ಒಲೆಯ ಮೇಲೆ 2 ಕಪ್ ನೀರು ಕುದಿಯಲು ಇಟ್ಟು ಅದಕ್ಕೆ 4 ರಿಂದ 5 ಬೇವಿನ ಎಲೆಗಳನ್ನು ಹಾಕಿ ಸ್ವಲ್ಪ ಶುಂಠಿಯನ್ನು ಸೇರಿಸಿ ಚೆನ್ನಾಗಿ ಹತ್ತು ನಿಮಿಷಗಳ ಕಾಲ ಕುದಿಸಿ.
ಕುದಿಯುತ್ತಿರುವ ನೀರಿನಲ್ಲಿ ಬೇವಿನ ಹಾಗೂ ಶುಂಠಿಯ ರಸಗಳನ್ನು ಚೆನ್ನಾಗಿ ಹೀರಿಕೊಂಡು ಚಹಾದ ರುಚಿ ಘಮ ಗುಡುತ್ತದೆ. ನೀರು ಹಸಿರು ಬಣ್ಣಕ್ಕೆ ತಿರುಗಿದ ನಂತರ ಅರ್ಧ ಟೀ ಚಮಚ
ಗ್ರೀನ್ ಟೀ ಪುಡಿ ಹಾಕಿ, ಸ್ಟೌ ಆರಿಸಿ ಇದನ್ನು ಸೋಸಿ, ಸ್ವಲ್ಪ ಬಿಸಿ ಆರಿದ ನಂತರ ಅದಕ್ಕೆ ಜೇನು ತುಪ್ಪವನ್ನು ಮಿಶ್ರಣ ಮಾಡಿ. ಇಂತಹ ಗಿಡಮೂಲಿಕೆ ಚಹಾವನ್ನು ಕುಡಿಯುವುದರಿಂದ ಆರೋಗ್ಯಕರ ದೇಹ ಮತ್ತು ಒಳ್ಳೆಯ ರೋಗ ನಿರೋಧಕ ಶಕ್ತಿ ನಿಮ್ಮದಾಗುತ್ತದೆ.