ಗಂಡ ಹೆಂಡತಿ ತಿಳಿದುಕೊಳ್ಳಲೇಬೇಕಾದ ಸುಖ ದಾಂಪತ್ಯ ಜೀವನದ 9 ರಹಸ್ಯಗಳು!

0 13,636

ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಎಂಬ ಬಹಳ ಪ್ರಸಿಧ್ಧ ಗಾದೆಮಾತಿದೆ. ಈ ಮಾತು ಸುಮ್ಮನೆ ಬಂದಿದ್ದಲ್ಲ. ಹಿರಿಯರ ಅನುಭವದ ಮಾತುಗಳೇ ಗಾದೆಯ ರೂಪದಲ್ಲಿ ಹೊರಹೊಮ್ಮಿವೆ ಎಂದರೆ ತಪ್ಪಾಗಲಾರದು. ಮದುವೆಗಳು ಸ್ವರ್ಗದಲ್ಲೇ ನಿಶ್ಚಯವಾಗಿರುತ್ತದೆ ಎಂದು ಹೇಳುತ್ತಾರೆ. ಆದರೆ ಇತ್ತೀಚಿನ ಕಾಲದಲ್ಲಿ ಮದುವೆಯಾದ ಮರು ದಿನವೇ ಡಿವೋರ್ಸ್​​ ಮೊರೆ ಹೋಗುವವರೇ ಹೆಚ್ಚು.

ಸಣ್ಣ ಪುಟ್ಟ ವಿಷಯಗಳನ್ನೂ ದೊಡ್ಡದು ಎಂದು ಭಾವಿಸುತ್ತಾ ಸಂಬಂಧಗಳನ್ನು ಕಡಿದುಕೊಳ್ಳುವ ಪ್ರಕರಣಗಳಂತೂ ಒಂದಲ್ಲ ಎರಡಲ್ಲ. ಎಲ್ಲಿ ಕೇಳಿದರೂ ಗಂಡನಿಂದ ಬೇಸರಗೊಂಡ ಹೆಂಡತಿ ಆತ್ಮಹತ್ಯೆ, ಹೆಂಡತಿ ಮಾತನಾಡಲಿಲ್ಲವೆಂದು ಸತ್ತ ಗಂಡ ಹೀಗೆ ಹೇಳುತ್ತಾ ಹೋದರೆ ದಿನಕ್ಕೆ ನಾಲ್ಕಾರು ಪ್ರಕರಣಗಳು ಗಂಭೀರ ವಿಷಯಗಳನ್ನು ಹೊರತುಪಡಿಸಿ, ಇಂತಹ ಕ್ಷುಲಕ ವಿಷಯಗಳೇ ಕಾರಣವಾಗಿರುತ್ತವೆ.

ಹಿಂದಿನ ದಿನಗಳಲ್ಲಿ ಕೂಡು ಕುಟುಂಬಗಳಿತ್ತು. ಮನೆಯಲ್ಲಿ ಗಂಡ ಹೆಂಡತಿ ನಡುವೆ ಜಗಳವಾದರೆ ಮನೆಯ ಹಿರಿಯರೂ ಅಲ್ಲೇ ಅವರಿಗೆ ತಿಳಿ ಹೇಳಿ ಸಮಾಧಾನಪಡಿಸಿ ಗಂಡ ಹೆಂಡತಿಯನ್ನು ಒಂದುಗೂಡಿಸುತ್ತಿದ್ದರು. ಆದರೆ ಇಂದಿನ ದಿನಗಳಲ್ಲಿ ಕೂಡು ಕುಟುಂಬವೆಂಬ ಪದ್ಧತಿಯೇ ಇಲ್ಲ. ಹೇಳಿ ಕೇಳಿ ಇಗಿನದ್ದು ಇಂಟರ್​ನೆಟ್​ ಯುಗ. ಕೈಯಲ್ಲೇ ಜಗತ್ತನ್ನು ಸುತ್ತಿಬರುವ ಜಾಯಮಾನ. ಗಂಡ ಹೆಂಡತಿಯರಿಬ್ಬರೂ ಒಂದೇ ಮನೆಯಲ್ಲಿದ್ದರೂ ಇಬ್ಬರ ನಡುವಿನ ಪರಸ್ಪರ ಒಡನಾಟ ಮಾತ್ರ ಮೊಬೈಲ್​ಗಳ ಮೂಲಕವೇ. ಹೀಗಿರುವಾಗ ಸಂಬಂಧಗಳ ಬೆಲೆ ಆದರೂ ಹೇಗೆ ಗೊತ್ತಾದೀತು.

ಇದಕ್ಕೆ ಹಿರಿಯರೂ ಹಿಂದಿನಿಂದ ಹೇಳಿಕೊಂಡು ಬಂದ ಅನೇಕ ಪರಿಹಾರ ಮಾರ್ಗಗಳು ಮತ್ತು ಸುಖ ಸಂಸಾರ ನಡೆಸುವವರ ಸಲಹೆಗಳು ಪಡೆಯುವುದು ಉತ್ತಮ. ಯಾಕೆಂದರೆ ಹಿರಿಯರೂ ಟೆಕ್ನಾಲಜಿ ಇಲ್ಲದ ಕಷ್ಟದ ದಿನಗಳಲ್ಲಿ ಸುಖವಾಗಿ ಬದುಕುವುದನ್ನು ನಡೆಸಲು ಕಲಿತವರು. ಅವರಿಗೆಲ್ಲ ಕಷ್ಟವೇ ಇರಲಿಲ್ಲವೆಂದಲ್ಲ. ಅವರಲ್ಲೂ ಗಂಡ ಹೆಂಡಿರ ನಡುವೆ ಭಿನ್ನಾಭಿಪ್ರಾಯಗಳು, ಅಸಮಾನತೆ, ತಾರತಮ್ಯ ಹೀಗೆ ಹತ್ತು ಹಲವು ಸಮಸ್ಯೆಗಳಿದ್ದರೂ ಅಂದಿನ ದಿನಗಳಲ್ಲಿ ಅವರೆಲ್ಲರೂ ಚಂದದ ಬದುಕನ್ನು ನಡೆಸಿದವರು. ಆದರೆ ಇಂದಿನ ದಿನಗಳಲ್ಲಿ ಸಣ್ಣ ಮಾತೇ ದೊಡ್ಡ ನಿರ್ಧಾರಕ್ಕೆ ಕಾರಣವಾಗುತ್ತವೆ.

ಇಂದಿನ ದಿನಗಳಲ್ಲಿ ಗಂಡ ಹೆಂಡತಿಯ ನಡುವೆ ಜಗಳವಾಗಲು ಕಾರಣವಾಗುವ ಕ್ಷುಲಕ ವಿಷಯಗಳೆಂದರೆ ಆಫೀಸಿನಿಂದ ಗಂಡ ತಡವಾಗಿ ಬರುವುದು. ಗಂಡ ಹೆಂಡತಿಯ ಮಾತು, ಹೆಂಡತಿ ಗಂಡನ ಮಾತನ್ನು ಆಲಿಸದಿರುವುದು. ನೆರೆಯ ಮನೆಯವರೊಂದಿಗೆ ಮಾತನಾಡಿದರೆ ಸಂಶಯ, ಹೆಚ್ಚಿನ ವಿದ್ಯಾಭ್ಯಾಸದ ಪ್ರಶಂಸೆ, ಶಾಪಿಂಗ್​ಗೆ ಬರದ ಗಂಡ, ರೀಲ್ಸ್​ ಮಾಡುವ ಹೆಂಡತಿ, ಮಕ್ಕಳನ್ನು ಶಾಲೆಗೆ ಬಿಡದ ಗಂಡ, ಮಕ್ಕಳಿಗೆ ಊಟ ಮಾಡಿಸಿದ ಹೆಂಡತಿ. ದುಂದುವೆಚ್ಚ, ಸಣ್ಣ ಪುಟ್ಟ ವಿಷಗಳಿಗೂ ಸಿಡುಕು, ಪರಸ್ಪರರ ಆಸಕ್ತಿಯನ್ನು ಗೌರವಿಸದಿರುವುದು ಹೀಗೆ ಹೇಳುತ್ತಾ ಹೋದರೆ ಕಾರಣಗಳ ಪುಸ್ತಕವನ್ನೇ ಬರೆಯಬಹುದು. ಆದರೆ ಇವುಗಳಿಂದ ಹೊರಬಂದು ಗಂಡ ಹೆಂಡತಿ ಸುಖವಾಗಿ ಸಂಸಾರ ನಡೆಸಲು ಕೆಲವು ಮಾರ್ಗೋಪಾಯಗಳು ಹಾಗೂ ಪರಿಹಾರಗಳು ಇಲ್ಲಿವೆ.

ಪರಸ್ಪರರನ್ನು ಗೌರವಿಸುವುದು-ಗಂಡ ಹೆಂಡತಿಯರಿಬ್ಬರೂ ಪರಸ್ಪರರನ್ನು ಹಾಗೂ ಇಬ್ಬರ ಆಸಕ್ತಿಯನ್ನು ಗೌರವಿಸಬೇಕು. ಹೀಗಾದಾಗ ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯ.

ಸಲಹೆಗಳನ್ನು ಆಲಿಸುವುದು-ಪರಸ್ಪರರ ಸಲಹೆಗಳನ್ನು ಇಬ್ಬರೂ ತಾಳ್ಮೆಯಿಂದ ಕೇಳಿ, ಅದಕ್ಕೆ ತಕ್ಕುದಾದ ನಿರ್ಧಾರವನ್ನು ತೆಗೆದುಕೊಂಡರೆ ಸಮಸ್ಯೆಯೇ ಬರುವುದಿಲ್ಲ.

ಕ್ಷುಲಕ ವಿಷಯಗಳಿಗೆ ಜಗಳ ಬೇಡ–ಸಣ್ಣ ಪುಟ್ಟ ವಿಷಯಗಳನ್ನೂ ಇಬ್ಬರೂ ದೊಡ್ಡದು ಮಾಡದೇ, ಆ ವಿಷಯದ ವಾಸ್ತವತೆಯನ್ನು ಅರಿತು ಆ ವಿಷಯಗಳನ್ನು ಗಂಭೀರವಾಗಿ ಪರಿಗಣಿಸಬಾರದು.

ಪರರಂತೆ ಬದುಕಬೇಕೆಂಬ ಅತಿಯಾಸೆ ಬೇಡ–ಹಾಸಿಗೆಯಿದ್ದಷ್ಟು ಕಾಲು ಚಾಚು ಎಂಬ ಗಾದೆಯಂತೆ ತಮ್ಮಗೆ ಇದ್ದುದರಲ್ಲೇ ಪರಸ್ಪರರು ಸಂತೋಷದಿಂದ ಬದುಕಲು ಕಲಿಯಬೇಕು. ಅದನ್ನು ಬಿಟ್ಟು ಅವರ ಮನೆ ಹಾಗಿದೆ, ನಮ್ಮ ಮನೆ ಹೀಗಿದೆ, ಅವರ ಬಳಿ ಕಾರಿದೆ, ನಮ್ಮ ಬಳಿ ಸ್ಕೂಟರು ಎಂದು ಪರರ ಹೋಲಿಕೆಯನ್ನು ಮಾಡುತ್ತಾ ನಿಮ್ಮ ದಿನನಿತ್ಯದ ಬದುಕನ್ನು ಹಾಳು ಮಾಡಿಕೊಳ್ಳಬಾರದು. ನಿಮ್ಮ ಬಳಿಯಿರುವುದೇ ಶೇಷ್ಠವೆಂದು ನೆನೆದು ಬದುಕು ನಡೆಸಬೇಕು.

ಪರಸ್ಪರರೊಂದಿಗೆ ಸಮಯ ಕಳೆಯಬೇಕು–ಗಂಡ ಹೆಂಡತಿ ಇಬ್ಬರೂ ತಮಗೆ ಸಿಗುವ ಸಮಯವನ್ನು ಪರಸ್ಪರ ಕಳೆಯುತ್ತಾ, ಪ್ರಯಾಣಗಳನ್ನು ಮಾಡುತ್ತಾ, ವಿಷಯಗಳನ್ನು ವಿನಿಮಯ ಮಾಡಿಕೊಳ್ಳಬೇಕು. ಇಬ್ಬರಿಗೂ ಇಷ್ಟವಾದ ಸ್ಥಳಗಳಿಗೆ ಭೇಟಿ ಕೊಡುವುದು. ಮೊಬೈಲ್​ನಲ್ಲಿ ಚಾಟ್​ ಮಾಡಿಕೊಂಡು ಸಂವಹನ ನಡೆಸುವ ಬದಲು ಇಬ್ಬರೂ ಪಕ್ಕಪಕ್ಕ ಕುಳಿತುಕೊಂಡು ಮಾತನಾಡಿದರೆ ಸಮಸ್ಯೆಯೇ ಇರುವುದಿಲ್ಲ.

ಅಹಂ, ಒಣ ಜಂಭ ಬಿಟ್ಟು ಮಾತು ಆರಂಭಿಸಬೇಕು.–ಗಂಡ ಹೆಂಡತಿಯ ನಡುವೆ ಜಗಳವಾದರೇ, ಗಂಡ ಮೊದಲು ಹೆಂಡತಿಯೇ ಮಾತನಾಡಲಿ ಎಂದೋ ಅಥವಾ ಹೆಂಡತಿ ಮೊದಲು ಗಂಡನೇ ಮಾತನಾಡಲಿ ಎಂದೂ ಸುಮ್ಮನೆ ಕೂತು ಕೋಪವನ್ನು ಬೆಳೆಸದೇ ಇಬ್ಬರೂ ಮುಂದು ಮಾತನಾಡಲು ಸಿದ್ಧರಾಗಿರಬೇಕು. ಆಗ ಕೋಪ ಹೆಚ್ಚು ಸಮಯವಿರುವುದಿಲ್ಲ.

ಕೆಲಸಗಳಲ್ಲಿ ಸಹಕಾರ–ಗಂಡನ ಕೆಲಸಗಳಲ್ಲಿ ಹೆಂಡತಿ ಹಾಗೂ ಹೆಂಡತಿಯ ಕೆಲಸಗಳಲ್ಲಿ ಗಂಡ ಪರಸ್ಪರ ಸಹಕರಿಸಬೇಕು. ಯಾರಿಗೂ ಯಾವುದೂ ಹೊರೆಯಾಗಬಾರದು. ಹೆಂಡತಿಗೆ ಮನೆ ಕೆಲಸದಲ್ಲಿ ಗಂಡನೂ ನೆರವಾಗಬೇಕು. ಮುಖ್ಯವಾಗಿ ಹೆಂಡತಿಗೆ ಮುಟ್ಟಿನ ಸಮಯ ಬಂದಾಗ ಅದನ್ನು ಸ್ವತಃ ಗಂಡನೇ ಅರ್ಥ ಮಾಡಿಕೊಂಡು ಆಕೆಗೆ ವಿಶ್ರಮಿಸಲು ಸಹಕರಿಸಿ, ಆಕೆಯ ಕೆಲಸದಲ್ಲಿ ನೆರವಾಗಬೇಕು.

ಕ್ಷಮಾ ಗುಣ ಮುಖ್ಯ–ಇಬ್ಬರಲ್ಲಿ ಯಾರಾದರೂ ತಪ್ಪು ಮಾಡಿದರೇ ಅದನ್ನೇ ಹೇಳಿ ಅವರ ಮನಸ್ಸನ್ನು ನೋಯಿಸುವ ಬದಲು, ತಪ್ಪನ್ನು ಕ್ಷಮಿಸಿ ಇನ್ನೆಂದೂ ಅದರ ಮಾತನ್ನು ತೆಗೆಯದೇ ಮೊದಲಿನಂತೆ ಕಾಣುವುದು ಬಹಳ ಮುಖ್ಯ. ಕ್ಷಮಾಪಣೆ ಕೇವಲ ಬಾಯಿ ಮಾತಿಗೆ ಆಗಿರದೆ ಬದಲಿಗೆ ಅದನ್ನು ಕಾರ್ಯ ರೂಪದಲ್ಲಿ ತೋರಿಸಬೇಕು.

ಕುಟುಂಬದವರ ಮೇಲೆ ಪ್ರೀತಿ ಮುಖ್ಯ–ಎಲ್ಲಾ ಸಂಬಂಧಗಳೂ ಬಹುಕಾಲ ಉಳಿಯಲು ಮುಖ್ಯವಾಗಿ ಬೇಕಾಗಿರುವದೇ ಪ್ರೀತಿ. ಪರಸ್ಪರ ಕುಟುಂಬದವರ ಮೇಲೆ ಇಬ್ಬರಿಗೂ ಗೌರವ, ಕಾಳಜಿ. ಪ್ರೀತಿಯಿರಬೇಕು. ಆಗ ಬದುಕು ಚಂದ. ಮಕ್ಕಳಾದವರು ಮಕ್ಕಳನ್ನು ಹೊರೆ, ತಮ್ಮ ಪ್ರೀತಿಗೆ ಅಡ್ಡಿಯೆಂದು ಭಾವಿಸದೇ ಮಕ್ಕಳನ್ನು ಮಮತೆಯಿಂದ ಕಾಣಬೇಕು. ಗಂಡನ ಮೇಲೆ ಹೆಂಡತಿಗೆ, ಹೆಂಡತಿ ಮೇಲೆ ಗಂಡನಿಗೆ ಪ್ರೀತಿ ಇದ್ದರೆ ಕೋಪ, ಜಗಳವೆಲ್ಲವೂ ಕ್ಷಣಮಾತ್ರ.

Leave A Reply

Your email address will not be published.