ದೀಪಾವಳಿ ಹಬ್ಬದಲ್ಲಿ ಅಪ್ಪಿತಪ್ಪಿಯೂ ಈ 3 ತಪ್ಪುಗಳನ್ನು ಮಾಡಬೇಡಿ!

0 1,467

ಬೆಳಕಿನ ಹಬ್ಬ ದೀಪಾವಳಿ ಬಂತೆಂದರೆ ಮನೆ ಮಂದಿಗೆಲ್ಲಾ ಸಡಗರ ಸಂಭ್ರಮ. ದೀಪವನ್ನು ಸಾಲಾಗಿ ಜೋಡಿಸಿ ಅವುಗಳ ಅಂದವನ್ನು ಕಣ್ತುಂಬಿಕೊಳ್ಳುವುದೇ ಕಣ್ಣಿಗೆ ಹಬ್ಬ. ಅಂಧಕಾರವನ್ನು ಹೋಗಲಾಡಿಸಿ ಬೆಳಕನ್ನು ಪಸರಿಸುವ ಬೆಳಕಿನ ಹಬ್ಬದಲ್ಲಿ ಲಕ್ಷ್ಮೀ ಪೂಜೆಯನ್ನು ಮಾಡಲಾಗುವುದು. ಐದು ದಿನಗಳು ನಡೆಯುವ ದೀಪಾವಳಿ ಹಬ್ಬದಲ್ಲಿ ಲಕ್ಷ್ಮಿ ಪೂಜೆ ಕೂಡ ವಿಶೇಷವಾಗಿದೆ. ಲಕ್ಷ್ಮಿಯನ್ನು ಪೂಜೆಯ ಮೂಲಕ ಒಲಿಸಿಕೊಂಡರೆ ಐಶ್ವರ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಲ್ಲಿ ಹಿಂದೂಗಳು ಲಕ್ಷ್ಮಿದೇವಿಯನ್ನು ಆರಾಧಿಸುತ್ತಾರೆ.

ದೀಪಾವಳಿ ಹಬ್ಬ ಅಂದರೆ ಅದು ಶುಭದ ಸಂಕೇತ, ಆದರೆ ನಾವು ಕೆಲವೊಂದು ತಪ್ಪುಗಳನ್ನು ಮಾಡುವುದರಿಂದ ಅಶುಭ ಉಂಟಾಗುವುದು, ಇದರಿಂದ ಜೀವನದಲ್ಲಿ ಅನೇಕ ಕಷ್ಟಗಳು ಎದುರಾಗುವುದು. ಆದ್ದರಿಂದ ದೀಪಾವಳಿ ಹಬ್ಬದಲ್ಲಿಈ ತಪ್ಪುಗಳನ್ನು ಮಾಡದಿರಿ:

  1. ಹಾಸಿಗೆ ಬಿಟ್ಟು ತಡವಾಗಿ ಏಳುವುದು

ರಜೆ ಇರುವ ದಿನ ತಡವಾಗಿ ಏಳುವ ಅಭ್ಯಾಸ ಕೆಲವರಲ್ಲಿ ಇರುತ್ತದೆ, ಆದರೆ ದೀಪಾವಳಿ ಹಬ್ಬದ ಸಮಯದಲ್ಲಿ ಹಬ್ಬಕ್ಕೆ ರಜೆಯಿದೆ, ದೀಪ ಹಚ್ಚಿ, ಪಟಾಕಿ ಹೊಡೆದು ಸಂಭ್ರಮಿಸುವುದು ರಾತ್ರಿ ಅಲ್ವಾ ಅಂತ ಬೆಳಗ್ಗೆ ತಡವಾಗಿ ಎದ್ದೇಳಬೇಡಿ, ಇದರಿಂದ ಅಶುಭ ಉಂಟಾಗುವುದು. ಈ ಶುಭ ದಿನದಂದು ಸೂರ್ಯ ಹುಟ್ಟುವ ಮುಂಚೆ ಎದ್ದು ಮಿಂದು, ಮಡಿಯಿಂದ ಲಕ್ಷ್ಮಿ ಪೂಜೆ ಮಾಡಿದರೆ ಆಕೆಯ ಕೃಪೆಗೆ ಪಾತ್ರರಾಗುತ್ತೀರಿ, ಇದರಿಂದ ಒಳಿತಾಗುವುದು.

  1. ಮನೆಯನ್ನು ಗಲೀಜು ಆಗಿ ಇಡಬೇಡಿ

ದೀಪಾವಳಿ ಹಬ್ಬಕ್ಕೆ ಇನ್ನು ಕೆಲವು ವಾರಗಳು ಇರುವಾಗಲೇ ಮನೆಯಲ್ಲಿ ಸ್ವಚ್ಛತಾ ಕಾರ್ಯ ಮಾಡುವುದನ್ನು ನೋಡಿರಬಹುದು. ದೀಪಾವಳಿಗೆ ಮನೆ ಸ್ವಚ್ಛವಾಗಿದ್ದರೆ ಮಾತ್ರ ಮನೆಗೆ ಐಶ್ವರ್ಯ ಲಭಿಸುವುದು, ಮನೆಯಲ್ಲಿ ಕಸ, ದೂಳು ಇದ್ದರೆ ಐಶ್ವರ್ಯ ಲಕ್ಷ್ಮಿ ಬದಲು ದರಿದ್ರ ಲಕ್ಷ್ಮಿ ಬರುತ್ತಾಳೆ ಎಂಬ ನಂಬಿಕೆಯಿದೆ. ಆದ್ದರಿಂದ ದೀಪಾವಳಿ ಹಬ್ಬಕ್ಕೆ ಮುನ್ನ ಮನೆಯನ್ನು ಸ್ವಚ್ಛವಾಗಿಡಿ.

  1. ಕೋಪಗೊಳ್ಳಬೇಡಿ

ಹಬ್ಬದ ಸಮಯದಲ್ಲಿ ಕೋಪಗೊಳ್ಳುವುದು ಒಳ್ಳೆಯದಲ್ಲ, ಇದರಿಂದ ಒಳಿತಾಗುವುದಿಲ್ಲ ಎಂದು ಹಿರಿಯರು ಬುದ್ಧಿ ಮಾತು ಹೇಳುತ್ತಾರೆ. ಮನೆ ಮಂದಿಯೆಲ್ಲಾ ಹಬ್ಬದ ಸಡಗರದಲ್ಲಿ ಖುಷಿ-ಖುಷಿ ಆಗಿರುವಾಗ ಯಾವುದೋ ಒಂದು ಕಾರಣಕ್ಕೆ ನಿಮಗೆ ಕೋಪ ಬಂದರೂ ಅದನ್ನು ನಿಯಂತ್ರಿಸಿ. ಏಕೆಂದರೆ ನೀವು ಕೋಪಗೊಂಡು ಕಿರುಚಾಡಿದರೆ ಅದರಿಂದ ಮನೆಯವರ ಮನಸ್ಸಿಗೆ ನೋವಾಗುವುದು, ಹಬ್ಬದ ಸಡಗರಕ್ಕೆ ತಣ್ಣೀರು ಎರಚಿದಂತಾಗುವುದು. ನಿಮ್ಮ ಕೋಪದಿಂದ ಮನೆಯವರ ಖುಷಿ ಹಾಳಾಗದಿರಲಿ. ಆದ್ದರಿಂದ ಮುಂಗೋಪ ನಿಮ್ಮ ಸ್ವಭಾವವಾಗಿದ್ದರೂ , ನಿಮಗೆ ಯಾವುದೋ ಕಾರಣಕ್ಕೆ ಕೋಪ ಬಂದರೂ ತಾಳ್ಮೆಯಿಂದ ವರ್ತಿಸಿ.

  1. ಸಂಜೆ ಹೊತ್ತು ಮಲಗಬೇಡಿ

ಸಾಮಾನ್ಯವಾಗಿ ಸಂಜೆ ದೀಪ ಹಚ್ಚುವ ಹೊತ್ತಿನಲ್ಲಿ ಮಲಗುವುದು ಶುಭವಲ್ಲ ಎಂಬ ನಂಬಿಕೆಯಿದೆ. ಗರ್ಭಿಣಿಯರು, ಆರೋಗ್ಯ ಸರಿಯಿಲ್ಲದವರನ್ನು ಬಿಟ್ಟು ಉಳಿದವರು ಆ ಹೊತ್ತಿನಲ್ಲಿ ಮಲಗಬಾರದು ಎಂದು ಹೇಳುವುದನ್ನು ಕೇಳಿರಬಾರದು. ಸಂಜೆ ಹೊತ್ತಿನಲ್ಲಿ ಮಲಗುವುದರಿಂದ ದಾರಿದ್ರ್ಯ ಬರುತ್ತದೆ ಎಂಬ ನಂಬಿಕೆಯಿದೆ, ಇನ್ನು ದೀಪಾವಳಿ ಹಬ್ಬದ ಸಮಯದಲ್ಲಿದಂತೂ ಸಂಜೆ ಹೊತ್ತು ಮಲಗಲೇಬೇಡಿ. ಹಬ್ಬದ ಸಡಗರರ ಸಂಭ್ರಮ ಹೆಚ್ಚುವುದೇ ಬೆಳಗುತ್ತಿರುವ ದೀಪಗಳ ಸಾಲನ್ನು ನೋಡುವಾಗ. ಆ ಹೊತ್ತಿನಲ್ಲಿ ನಿದ್ದೆಗೆ ಜಾರಿದರೆ ಆ ಖುಷಿಯನ್ನು ಕಣ್ತುಂಬಿಕೊಳ್ಳಲು ಸಾಧ್ಯವಾಗುವುದಿಲ್ಲ. ವರ್ಷಕ್ಕೊಮ್ಮೆ ಬರುವ ದೀಪಾವಳಿ ಸಡಗರವನ್ನು ಆಲಸ್ಯ ಗುಣದಿಂದಾಗಿ ಕಳೆದುಕೊಳ್ಳಬೇಡಿ. ಮನೆಯವರ ಜತೆಗೂಡಿ ದೀಪ ಹಚ್ಚಿ, ಪರಿಸರ ಸ್ನೇಹಿಯಾಗಿ ದೀಪಾವಳಿ ಆಚರಿಸಿ ಸಂಭ್ರಮಿಸಿ.

  1. ಜಗಳವಾಡಬೇಡಿ

ದೀಪಾವಳಿ ಸಮಯದಲ್ಲಿ ಸ್ನೇಹಿತರು ಹಾಗೂ ಮನೆಯವರ ಜತೆ ಜಗಳವಾಡಬೇಡಿ. ಜಗಳವಾಡುವುದರಿಂದ ಮನಸ್ಸಿನಲ್ಲಿ ದ್ವೇಷ ಉಂಟಾಗುತ್ತದೆ, ಇದರಿಂದ ಬೆಳಕಿನ ಹಬ್ಬದ ಸಂಭ್ರಮ ಸವಿಯಲು ಸಾಧ್ಯವಿಲ್ಲ. ಜಗಳವಾಡಿ ಹಬ್ಬದ ಖುಷಿ ಹಾಳಾಗದಿರಲಿ. ಎಲ್ಲರೂ ಖುಷಿಯಾಗಿದ್ದರೆ ಮಾತ್ರ ಬೆಳಕಿನ ಹಬ್ಬ ಸಡಗರ-ಸಂಭ್ರಮದಿಂದ ಕೂಡಿರುವುದು. ಆದ್ದರಿಂದ ವಿನಾಕಾರಣ ಜಗಳಕ್ಕೆ ಹೋಗಬೇಡಿ. ನಿಮ್ಮ ಮನಸ್ಸು ಧನಾತ್ಮಕವಾಗಿ ಚಿಂತಿಸಿದರೆ ಖುಷಿಯಾಗಿರಲು ಸಾಧ್ಯ. ಮನೆಯಲ್ಲಿ ದೀಪ ಬೆಳಗುತ್ತಾ ಮನೆಯ ಕತ್ತಲನ್ನು ಓಡಿಸುವಂತೆ ನಿಮ್ಮಲ್ಲಿನ ಉತ್ತಮ ಆಲೋಚನೆಗಳು ನಿಮ್ಮ ಮನಸ್ಸಿನಲ್ಲಿನ ಕತ್ತಲನ್ನು ಹೋಗಲಾಡಿಸುವುದು.

  1. ಮದ್ಯ ಪಾರ್ಟಿ ಬೇಡ

ದೀಪಾವಳಿ ಹಬ್ಬವೆಂದರೆ ಅದು ನಮ್ಮ ಸಂಸ್ಕೃತಿಯ ಪ್ರತೀಕ. ಈ ಹಬ್ಬದಂದು ವಿವಿಧ ಬಗೆಯ ಭಕ್ಷ್ಯಗಳನ್ನು ತಯಾರಿಸಿ, ಮನೆಮಂದಿಯೆಲ್ಲಾ ಕುಳಿತು ಹಬ್ಬದ ಅಡುಗೆಯ ಖುಷಿಯನ್ನು ಸವಿಯುವ ಖುಷಿಯೇ ಬೇರೆ. ಈ ಹಬ್ಬದಲ್ಲಿ ತಪ್ಪಿಯೂ ಮದ್ಯ ಸೇವನೆ ಮಾಡಬೇಡಿ. ದೀಪಾವಳಿ ಹಬ್ಬಕ್ಕೆ ಮದ್ಯ ಮುಟ್ಟಿದರೆ ಲಕ್ಷ್ಮಿಯ ಅವಕೃಪೆ ಉಂಟಾಗುವುದು. ಸಾತ್ವಿಕ ಆಹಾರದ ಸವಿಯನ್ನು ಸವಿಯುತ್ತಾ, ದೀಪದ ಬೆಳಕಿನ ಸೊಬಗನ್ನು ಕಣ್ತುಂಬಿಗೊಳ್ಳುತ್ತಾ ಸಡಗರ ಸಂಭ್ರಮದಿಂದ ದೀಪಾವಳಿ ಹಬ್ಬವನ್ನು ಆಚರಿಸಿ. ಈ ದೀಪಾವಳಿ ನಿಮಗೆ ಆರೋಗ್ಯ, ಐಶ್ವರ್ಯ ಪ್ರಾಪ್ತಿ ಮಾಡಲೆಂದು ಕನ್ನಡ ಶುಭ ಕೋರುತ್ತಿದೆ.

Leave A Reply

Your email address will not be published.