ಒಂದು ದಿನಕ್ಕೆ ಎಷ್ಟು ಯೋಗಾಸನ ಮಾಡಬೇಕು!
ಯೋಗ ಮಾಡಲೂ ಯೋಗ ಬೇಕು. ಯೋಗಕ್ಕೆ ಎಲ್ಲರಿಗೂ ಸಮಯ, ಮನಸ್ಸು ಸಂದರ್ಭ ಕೂಡಿ ಬರುವುದಿಲ್ಲ. ಊಟ ನಿದ್ದೆಯಂತೆಯೇ ಯೋಗವೂ ದಿನನಿತ್ಯದ ಆದ್ಯತೆಯಾದರೆ, ಆರೋಗ್ಯವೂ ನಮ್ಮ ಕೈಯಲ್ಲೇ ಇರುತ್ತದೆ. ಯೋಗವನ್ನು ನಿತ್ಯದ ಭಾಗವಾಗಿ ಯಾಕೆ ಮಾಡಿಕೊಳ್ಳಬೇಕು ಎಂಬುದಕ್ಕೆ ೧೦ ಕಾರಣಗಳನ್ನು ಧಾರಾಳವಾಗಿ ನೀಡಬಹುದು.
೧.. ದೇಹವನ್ನು ಬೇಕಾದ ಹಾಗೆ ಬಗ್ಗಿಸುತ್ತದೆ! ಹೌದು. ಎಳವೆಯಲ್ಲೇ ದೇಹ ಬಗ್ಗಿದಷ್ಟು ಸುಲಭವಾಗಿ ವಯಸ್ಸಾಗುತ್ತಾ ಆಗುತ್ತಾ ಬಗ್ಗದು. ಕೂತು ಕೂತು ಯಾವುದಕ್ಕೂ ಬಗ್ಗದ ದೇಹ ಯೋಗದ ನಿಯಮಿತ ಅಭ್ಯಾಸದಿಂದ ನಮ್ಮ ಮಾತನ್ನು ಕೇಳಲಾರಂಬಿಸುತ್ತದೆ. ಬಗ್ಗಿಸಿದಲ್ಲಿ ಬಗ್ಗುತ್ತದೆ. ಬೆನ್ನು, ಭುಜ, ಸೊಂಟ ಎಲ್ಲವೂ ನಮ್ಮ ಮಾತನ್ನು ಕೇಳುತ್ತವೆ. ಮಾಡುವ ದಿನನಿತ್ಯದ ಕೆಲಸ ಕಷ್ಟವೆಂಬ ಯೋಚನೆಯನ್ನು ಹುಟ್ಟುಹಾಕುವುದಿಲ್ಲ. ಸುಲಭವಾಗಿ ಎಲ್ಲ ಕೆಲಸಗಳನ್ನು ಮಾಡಿಕೊಂಡು ಹೋಗುವಲ್ಲಿ ನಮ್ಮ ದೇಹ ನಮ್ಮ ಮಾತನ್ನು ಕೇಳಲಾರಂಭಿಸಿದರೆ, ನೆಮ್ಮದಿಯ ಬದುಕಿಗೆ ಬೇರೇನು ಬೇಕು ಹೇಳಿ!
೨. ಶಕ್ತಿಯನ್ನು ಹೆಚ್ಚಿಸುತ್ತದೆ! ಬಹಳಷ್ಟು ಯೋಗ ಆಸನಗಳು ನಿಮ್ಮದೇ ದೇಹವನ್ನು ನೀವು ಹೊತ್ತುಕೊಳ್ಳುವ ಸಾಮರ್ಥ್ಯವನ್ನು ಬೇಡುತ್ತವೆ. ನಿಯಮಿತ ಅಭ್ಯಾಸದಿಂದ ಉಸಿರಿನ ಮೇಲಿನ ನಿಮ್ಮ ಹಿಡಿತವನ್ನು ಸಾಧಿಸುವುದರೊಂದಿಗೆ ಮೂಲಕ ದೇಹದ ಮಾಂಸಖಂಡಗಳು ಬಲಗೊಂಡು ಸದೃಢವಾಗುತ್ತದೆ. ನಿಮ್ಮ ಶಕ್ತಿ ಸಾಮರ್ಥ್ಯವೂ ವೃದ್ಧಿಯಾಗುತ್ತದೆ.
೩. ದೇಹದ ಸಮತೋಲನ ಕಾಪಾಡುತ್ತದೆ. ಪ್ರತಿನಿತ್ಯದ ಯೋಗಾಭ್ಯಾಸ ನಮ್ಮ ದೇಹದ ಸಮತೋಲನವನ್ನು ಕಾಯ್ದುಕೊಳ್ಳಲು ನೆರವಾಗುತ್ತದೆ. ದೇಹಕ್ಕೊಂದು ನಿರ್ಧಿಷ್ಟ ಸಮತೋಲಿತ ರೂಪವನ್ನೂ ನೀಡುತ್ತದೆ.
೪. ಗಂಟುಗಳ ಸಮಸ್ಯೆಗೆ ಪರಿಹಾರ ಒದಗಿಸುತ್ತದೆ. ನಿಯಮಿತ ಯೋಗಾಭ್ಯಾಸದಿಂದ ವಯಸ್ಸಾದಂತೆ ಎಲ್ಲರನ್ನು ಕಾಡುವ ಗಂಟುನೋವಿನ ಸಮಸ್ಯೆಗೆ ಪರಿಹಾರ ಸಿಗುತ್ತದೆ. ದೇಹದ ಮೇಲೆ ಬೀಳುವ ಒತ್ತಡವನ್ನೂ ಕಡಿಮೆ ಮಾಡುತ್ತದೆ.
೫. ಬೆನ್ನುನೋವಿನ ಸಮಸ್ಯೆಗೂ ಯೋಗಾಭ್ಯಾಸ ಒಳ್ಳೆಯದು. ಕಂಪ್ಯೂಟರ್ ಮುಂದೆ ದಿನವೂ ಕೂತು ಮಾಡುವ ಕೆಲಸ, ಸಂಚಾರದಟ್ಟಣೆಯಲ್ಲಿ ವಾಹನ ಚಾಲನೆ, ಹಾಗೂ ಜೀವನಶೈಲಿಯಿಂದ ಇಂದು ಬೆನ್ನು ನೋವು ಎಲ್ಲರೂ ಎದುರಿಸುತ್ತಿರುವ ಸಮಸ್ಯೆ. ನಿಯಮಿತ ಯೋಗಾಭ್ಯಾಸ ಈ ಸಮಸ್ಯೆಗೆ ತಕ್ಕಮಟ್ಟಿನ ಪರಿಹಾರ ನೀಡಿ, ನೋವನ್ನು ಹತೋಟಿಯಲ್ಲಿಡಲು ಸಹಕಾರಿಯಾಗುತ್ತದೆ.
೬. ಉಸಿರಾಟದ ಮೇಲಿನ ನಿಯಂತ್ರಣ ಸಿಗುತ್ತದೆ. ಯೋಗದ ಪ್ರಮುಖ ಭಾಗವಾದ ಪ್ರಾಣಾಯಾಮದ ನಿಯಮಿತ ಅಭ್ಯಾಸದಿಂದ ಉಸಿರಾಟಕ್ಕೊಂದು ಹದ ಬರುತ್ತದೆ. ಉಸಿರಾಟ ಸಂಬಂಧಿ ತೊಂದರೆಗಳಿಗೂ ತಕ್ಕಮಟ್ಟಿನ ಪರಿಹಾರ ನೀಡುತ್ತದೆ.
೭. ಯೋಗಾಭ್ಯಾಸ ದೇಹಕ್ಕೆ ಮಾತ್ರವಲ್ಲ, ಮನಸ್ಸಿಗೆ ಶಾಂತಿ, ಉಲ್ಲಾಸವನ್ನು ನೀಡುತ್ತದೆ. ನಿಯಮಿತ ಯೋಗ, ಧ್ಯಾನ ಹಾಗೂ ಪ್ರಾಣಾಯಾಮಗಳನ್ನು ರೂಢಿಸಿಕೊಂಡರೆ ಮಾನಸಿಕ ಆರೋಗ್ಯ ಹತೋಟಿಯಲ್ಲಿರುತ್ತದೆ.
೮. ಮಾನಸಿಕ ಒತ್ತಡ ಕಡಿಮೆ ಮಾಡುತ್ತದೆ. ಇಂದಿನ ನಾಗಾಲೋಟದ ಜೀವನಕ್ರಮ, ಸ್ಪರ್ಧಾತ್ಮಕ ಬದುಕು, ವೃತ್ತಿಯಲ್ಲಿರುವ ಅತೀವ ಒತ್ತಡಗಳಿಂದ ಇಂದು ಬಹಳಷ್ಟು ಮಂದಿ ಮಾನಸಿಕ ತೊಂದರೆಗಳಿಗೆ ಒಳಗಾಗುತ್ತಾರೆ. ಇಂತಹ ಸಮಸ್ಯೆಗಳಿಗೆ ಮುಕ್ತಿ ನೀಡಿ ಒತ್ತಡದ ಬದುಕನ್ನು ಹಳಿಯಲ್ಲಿ ತರಲು ಇದೇ ಯೋಗಾಭ್ಯಾಸ, ಪ್ರಾಣಾಯಾಮ ಸಹಕಾರಿಯಾಗಿದೆ.
ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ದೇಹ ಹಾಗೂ ಮನಸ್ಸನ್ನು ತಮ್ಮದೇ ಹತೋಟಿಯಲ್ಲಿಡುವ ಮೂಲಕ ಆತ್ಮತೃಪ್ತಿ ಹೊಂದುವ ಮಾರ್ಗವೇ ಯೋಗ. ಇವೆರಡರ ಹತೋಟಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.
ಹೃದಯದ ಆರೋಗ್ಯಕ್ಕೆ ಯೋಗ ಉತ್ತಮ. ಯೋಗಾಭ್ಯಾಸ ರಕ್ತ ಪರಿಚಲನೆಗೆ ವೇಗ ಕೊಡುವುದಲ್ಲದೆ, ಹೃದಯ ಸಂಬಂಧಿ ತೊಂದರೆಗಳಿಗೆ ಪರಿಹಾರ ನೀಡುತ್ತದೆ. ರಕ್ತದೊತ್ತಡ, ಬೊಜ್ಜು ಇತ್ಯಾದಿ ತೊಂದರೆಗಳಿಗೆ ಯೋಗ ಉತ್ತಮ ಪರಿಹಾರವಾಗಿರುವುದರಿಂದ ಯೋಗ ಪರೋಕ್ಷವಾಗಿ ಹೃದಯವನ್ನು ಆರೋಗ್ಯವಾಗಿರಿಸಲು ಸಹಾಯ ಮಾಡುತ್ತದೆ.
೧1. ಉತ್ತಮ ನಿದ್ದೆಯನ್ನೂ ತರಿಸುತ್ತದೆ. ನಿದ್ರೆಯ ತೊಂದರೆಗಳಿಂದ ಕಷ್ಟಪಡುತ್ತಿದ್ದ ಅನೇಕರು ನಿಯಮಿತ ಯೋಗಾಭ್ಯಾಸದಿಂದ ಈ ಸಮಸ್ಯೆಗೆ ಯಾವುದೇ ಔಷಧಿ ಸೇವನೆಯಿಲ್ಲದೆ ಪರಿಹಾರ ಕಂಡುಕೊಂಡಿದ್ದಾರೆ.